Close

ಪ್ರವಾಸೋದ್ಯಮ

ಬೆಂಗಳೂರು ಭಾರತದ ರಾಜ್ಯ ಕರ್ನಾಟಕದ ರಾಜಧಾನಿಯಾಗಿದೆ. ಈ ನಗರವನ್ನು “ಭಾರತದ ಉದ್ಯಾನ ನಗರ” ವೆಂದು ಪ್ರಸಿದ್ಧವಾಗಿದೆ. ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಬೆಂಗಳೂರು ಒಂದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ,ಲಾಲ್ಭಾಗ್, ಕಬ್ಬನ್ ಪಾರ್ಕ್, ಮುತ್ಯಲಾ ಮಡುವು, ಬಸವನಗುಡಿ, ಇಸ್ಕಾನ್, ವಿದಾನ ಸೌಧ, ದೊಡ್ಡ ಆಲದ ಮರ, ಅಲೋರು ಸೊಮೇಶ್ವರ ದೇವಸ್ಥಾನಗಳು ಕೆಲವು ಆಸಕ್ತಿದಾಯಕ ಸ್ಥಳಗಳಾಗಿವೆ. ಬೆಂಗಳೂರಿನಲ್ಲಿ ಹಲವು ಸರೋವರಗಳು ಮತ್ತು ಉದ್ಯಾನವನಗಳಿವೆ. ಬಿಎಂಟಿಸಿ ಬೆಂಗಳೂರಿನ ದೃಶ್ಯವೀಕ್ಷಣೆಗೆ ವಿಶೇಷ ಬಸ್ಗಳನ್ನು (ಕಾವೇರಿ – ಡಬಲ್ ಡೆಕ್ಕರ್ ತೆರೆದ ಛಾವಣಿಯ ಬಸ್) ಒದಗಿಸುತ್ತದೆ.

ಐತಿಹಾಸಿಕ ತಾಣಗಳು
  • ಸ್ವಾತಂತ್ರ್ಯ ಉದ್ಯಾನವನ (ಕೇಂದ್ರ ಕಾರಾಗ್ರಹ):ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ನಗರದ ಹೃದಯಭಾಗದಲ್ಲಿ ಗಾಂಧಿ ನಗರ ಬಳಿ ಇದೆ, ಮೆಜೆಸ್ಟಿಕ್ ಮತ್ತು ಕಬ್ಬನ್ ಪಾರ್ಕ್‌ನಿಂದ 2 ಕಿ.ಮೀ. ದೂರದಲ್ಲಿರುವ ಸ್ವಾತಂತ್ರ್ಯ ಉದ್ಯಾನವನ ಹಿಂದೆ ಕೇಂದ್ರ ಕಾರಾಗೃಹವಾಗಿತ್ತು. ಬೆಂಗಳೂರಿನ ಕೇಂದ್ರ ಕಾರಾಗ್ರಹ 1975 ರ ತುರ್ತು ಪರಿಸ್ಥಿತಿಯಲ್ಲಿ ಹಲವಾರು ಪ್ರಮುಖ ರಾಜಕೀಯ ನಾಯಕರನ್ನು ಬಂಧಿಸಲು ಬಳಸಲ್ಪಟ್ಟ ಕಾರಣ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯ ಉದ್ಯಾನವನ ವನ್ನು ಮಾಜಿ ಕೇಂದ್ರ ಸಚಿವ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರು 2008ರಲ್ಲಿಉದ್ಘಾಟಿಸಿದರು. ಆ ನಂತರ ಸ್ವಾತಂತ್ರ್ಯ ಉದ್ಯಾನವನ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಯಿತು.
  • ವಿಧಾನ ಸೌಧ: ವಿಧಾನ ಸೌಧ ಕರ್ನಾಟಕದ ರಾಜ್ಯ ಸರಕಾರದ ಆಡಳಿತಾತ್ಮಕ ಕಟ್ಟಡವಾಗಿದ್ದು, ಬೆಂಗಳೂರಿನ ಅತ್ಯಂತ ಭವ್ಯ, ಹೆಸರಾಂತ ಕಟ್ಟಡವಾಗಿದೆ. ಬೆಂಗಳೂರು ಅಥವಾ ಕರ್ನಾಟಕ ಎಂದೊಡನೆ ವಿಧಾನ ಸೌಧದ ಚಿತ್ರಣ ಕಣ್ಣ ಮುಂದೆ ಮೂಡುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಕರ್ನಾಟಕ/ಬೆಂಗಳೂರನ್ನು ಪ್ರತಿನಿಧಿಸುವ ಸಾಂಕೇತಿಕ ಚಿತ್ರವಾಗಿ ವಿಧಾನ ಸೌಧ ಕಾಣಸಿಗುತ್ತದೆ . ಇದು ಬೆಂಗಳೂರು ನಗರದ ಹೃದಯಭಾಗದಲ್ಲಿ ಡಾ ಅಂಬೇಡ್ಕರ್ ವೀಧಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಎದುರು ಇದೆ. ವಿಧಾನ ಸೌಧದ ಎದುರೊಂದು ಸೆಲ್ಫಿ ತೆಗೆದುಕೊಳ್ಳದಿದ್ದರೆ ಹೆಚ್ಚಿನವರ ಬೆಂಗಳೂರು ಪ್ರವಾಸ ಅಪೂರ್ಣವಾಗಿಯೇ ಉಳಿಯುತ್ತದೆ. 1952 ಮತ್ತು 1956 ರ ನಡುವೆ ಮೈಸೂರಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರಿಂದ ವಿಧಾನ ಸೌಧದ ಪರಿಕಲ್ಪನೆ ಮತ್ತು ನಿರ್ಮಾಣ ನಡೆಯಿತು. ಎರಡೂವರೆ ವರ್ಷಗಳ ಅವಧಿಯಲ್ಲಿ 5000 ಕ್ಕೂ ಹೆಚ್ಚು ಕಾರ್ಮಿಕರು ಮತ್ತು 1500 ಶಿಲ್ಪಿಗಳು ವಿಧಾನ ಸೌಧವನ್ನು ನಿರ್ಮಿಸಲು ಹಗಲಿರುಳು ಕೆಲಸ ಮಾಡಿದರು.ವಿಧಾನ ಸೌಧದೊಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಹೊರಗಿನಿಂದ ನೋಡಿ ಫೋಟೋ ತೆಗೆಯಬಹುದಾಗಿದೆ.
  • ಅಟ್ಟಾರ ಕಚೇರಿ: ಇಂದು ಕರ್ನಾಟಕ ಉಚ್ಚ ನ್ಯಾಯಾಲಯ ಇರುವ ಕಟ್ಟಡವನ್ನು ಅಟ್ಟಾರ ಕಚೇರಿ ಎಂದು ಕರೆಯಲಾಗುತ್ತಿತ್ತು. ಮೊದಲು ಇಲ್ಲಿ ಹದಿನೆಂಟು ವಿವಿಧ ಸರಕಾರೀ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದುದರಿಂದ ಹಿಂದಿ ಪದದಿಂದ ಈ ಹೆಸರು ಚಾಲ್ತಿಗೆ ಬಂದಿತು. ಕೆಂಪು ಬಣ್ಣದ ಎರಡು ಮಹಡಿಯ ಈ ಕಟ್ಟಡ ವಿಧಾನ ಸೌಧದ ಎದುರಿಗಿದ್ದು ಐತಿಹಾಸಿಕವಾಗಿದೆ. ಉಚ್ಚ ನ್ಯಾಯಾಲಯದೊಳಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ.
  • ಬೆಂಗಳೂರು ಅರಮನೆ: ಬೆಂಗಳೂರು ಅರಮನೆಯು ಬೆಂಗಳೂರಿನ ಹಿಂದಿನ ರಾಜ ನಿವಾಸವಾಗಿದ್ದು, ಈಗ ಪ್ರವಾಸಿ ಆಕರ್ಷಣೆ ಮತ್ತು ಸಭಾಂಗಣ ವಾಗಿದೆ. ಬೆಂಗಳೂರಿನಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತಿದ್ದ ಮೈಸೂರಿನ ಯುವ ಮಹಾರಾಜ, 10 ನೇ ಚಾಮರಾಜೇಂದ್ರ ಒಡೆಯರ್ ಅವರ ನಿವಾಸವಾಗಿ 1878ರಲ್ಲಿ ಬೆಂಗಳೂರು ಅರಮನೆಯನ್ನು ನಿರ್ಮಿಸಲಾಯಿತು.
  • ಟಿಪ್ಪು ಅರಮನೆ ಮತ್ತು ಕೋಟೆ: ಟಿಪ್ಪು ಸುಲ್ತಾನ್ ಕೋಟೆ ಮತ್ತು ಅರಮನೆ ಮಧ್ಯ ಬೆಂಗಳೂರಿನ ಜನನಿಬಿಡ ಕೆಆರ್ ಮಾರುಕಟ್ಟೆ ಪ್ರದೇಶದಲ್ಲಿದೆ. ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾದ ಟಿಪ್ಪು ಅರಮನೆ ಮತ್ತು ಕೋಟೆಯನ್ನು ಟಿಪ್ಪು ಸುಲ್ತಾನನ ಬೇಸಿಗೆ ನಿವಾಸವಾಗಿ ಬಳಸಲಾಯಿತು. ಟಿಪ್ಪು ಸುಲ್ತಾನ್ ಕೋಟೆ ಮತ್ತು ಅರಮನೆಯು ಪ್ರತಿದಿನ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.
  • ಟೌನ್ ಹಾಲ್: ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ವನ್ನು 1935 ರಲ್ಲಿ ಸಾಂಪ್ರದಾಯಿಕ ಯುರೋಪಿಯನ್ ಶೈಲಿಯಲ್ಲಿ ದೈತ್ಯ ಸ್ತಂಭಗಳೊಂದಿಗೆ ನಿರ್ಮಿಸಲಾಯಿತು. ಪುರಭವನವನ್ನು ವಿವಿಧ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಗೆ ಬಳಸಲಾಗುತ್ತದೆ.
  • ಕಾರ್ಪೊರೇಷನ್ ಕಟ್ಟಡ: 1936ರ ಈ ಕಟ್ಟಡವು ಆಕರ್ಷಕ ಗುಮ್ಮಟ, ಗಡಿಯಾರ ಗೋಪುರ ಮತ್ತು ಪುರಾತನ ಶೈಲಿಯನ್ನು ಹೊಂದಿದೆ. ಕಾರ್ಪೊರೇಷನ್ ಕಟ್ಟಡದಲ್ಲಿ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮತ್ತು ನಗರ ಮೇಯರ್ ಕಚೇರಿಗಳಿವೆ.
  • ಮೇಯೋ ಹಾಲ್: 1883ರಲ್ಲಿ ಲಾರ್ಡ್ ಮೇಯೋ (ಭಾರತದ ಮಾಜಿ ಗವರ್ನರ್ ಜನರಲ್) ಅವರ ನೆನಪಿಗಾಗಿ ನಿರ್ಮಿಸಲಾದ ಎರಡು ಅಂತಸ್ತಿನ ಇಂಡೋ-ಸಾರ್ಸೆನಿಕ್ ಶೈಲಿಯ ಕಟ್ಟಡವು ಈಗ ಸರ್ಕಾರಿ ಕಚೇರಿಗಳಿಗೆ ನೆಲೆಯಾಗಿದೆ.
  • ಶೇಷಾದ್ರಿ ಅಯ್ಯರ್ ಸ್ಮಾರಕ ಸಭಾಂಗಣ: ಕಬ್ಬನ್ ಪಾರ್ಕ್ ಕೇಂದ್ರ ಗ್ರಂಥಾಲಯವು ಶೇಷಾದ್ರಿ ಅಯ್ಯರ್ ಸ್ಮಾರಕ ಭವನದಲ್ಲಿದೆ. ಕೇಂದ್ರ ಗ್ರಂಥಾಲಯವು ಸೋಮವಾರ, ಸಾರ್ವಜನಿಕ ರಜಾದಿನಗಳು ಮತ್ತು ತಿಂಗಳ ಎರಡನೇ ಮಂಗಳವಾರಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 8.30 ರಿಂದ ಸಂಜೆ 7.30ರವರೆಗೆ ತೆರೆದಿರುತ್ತದೆ. ಮುಂಭಾಗದಲ್ಲಿ ವರ್ಣರಂಜಿತ ಹೂದೋಟವಿದೆ.
  • ರಾಜ ಭವನ: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರ ಅಧಿಕೃತ ನಿವಾಸವಾಗಿದೆ. ರಾಜ ಭವನ 1840ರ ದಶಕದಲ್ಲಿ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ ಒಂದು ಅಪ್ರತಿಮ ಕಟ್ಟಡವಾಗಿದೆ. ರಾಜ ಭವನವನ್ನು ಹಿಂದೆ ಬೆಂಗಳೂರು ರೆಸಿಡೆನ್ಸಿ ಎಂದು ಕರೆಯಲಾಗುತ್ತಿತ್ತು. ರಾಜ ಭವನವು ಬೆಂಗಳೂರಿನ ಕೇಂದ್ರದಲ್ಲಿರುವ ಹೈ ಗ್ರೌಂಡ್ಸ್ ಇಲಾಖೆಯಲ್ಲಿದೆ ಮತ್ತು ಅದರ ಸುತ್ತಲೂ ದೊಡ್ಡ ಉದ್ಯಾನವಿದೆ.
 
ಸಾಹಸ ಮತ್ತು ಚಟುವಟಿಕೆಗಳು
  • ಬೆಂಗಳೂರಿನಲ್ಲಿ ಲಘು ವಿಮಾನ ಹಾರಾಟ: ಬೆಂಗಳೂರಿನಲ್ಲಿ ನೀವು ವಿಮಾನವನ್ನು ಹಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಯಾವುದೇ ಪರವಾನಗಿ ಅಗತ್ಯವಿಲ್ಲದೇ, ಜಕ್ಕೂರ್ ಏರೋಡ್ರೋಮ್‌ನಲ್ಲಿ ಇದು ಸಾಧ್ಯವಿದೆ. ಮೈಕ್ರೊಲೈಟ್ ವಿಮಾನಗಳು ಪೈಲಟ್ ಮತ್ತು ಒಬ್ಬ ವಿದ್ಯಾರ್ಥಿ / ಪ್ರಯಾಣಿಕರಿಗಾಗಿ ನಿರ್ಮಿಸಲಾದ ಸಣ್ಣ ಎರಡು ಆಸನಗಳ ವಿಮಾನಗಳಾಗಿವೆ. ಝೆನ್ ಏರ್ ಮತ್ತು ಎಕ್ಸ್ ಏರ್ ಬೆಂಗಳೂರಿನಲ್ಲಿ ವಿಮಾನಯಾನ ಕಂಪನಿಗಳು ಬಳಸುವ ಎರಡು ಜನಪ್ರಿಯ ಮೈಕ್ರೊಲೈಟ್ ಮಾದರಿಗಳಾಗಿವೆ. ಮೈಕ್ರೋ ಲೈಟ್ ಪ್ಲೇನ್ ಆಪರೇಟರ್‌ಗಳು ಮೋಜಿನ ಸವಾರಿಗಳನ್ನು ಆಯೋಜಿಸುತ್ತಾರೆ. ಮುಂಗಡ ಕಾಯ್ದಿರಿಸಿ ಪೈಲಟ್‌ನೊಂದಿಗೆ ಪ್ರಯಾಣಿಕರ ಸೈಟಿನಲ್ಲಿ ಕುಳಿತು ಸಣ್ಣ ಹಾರಾಟ ಮಾಡಬಹುದು. ಹಾರಾಟದ ಸಮಯದಲ್ಲಿ ಹಾರಾಟದ ಮೂಲಭೂತ ಅಂಶಗಳನ್ನು ಪ್ರಯಾಣಿಕರಿಗೆ ವಿವರಿಸಲಾಗುವುದು ಮತ್ತು ಪ್ರಯಾಣಿಕರು ಕೆಲ ನಿಮಿಷಗಳ ಕಾಲ ವಿಮಾನವನ್ನು ತಮ್ಮ ವಶಕ್ಕೆ ಪಡೆದು ದಿಕ್ಕು ಬದಲಿಸುವುದು, ಎತ್ತರವನ್ನು ಹೆಚ್ಚಿಸುವುದು / ಇಳಿಸುವುದು ಮುಂತಾದ ಕೆಲವು ಸರಳ ಚಾಲನೆಯನ್ನು ಮಾಡಿ ವಿಮಾನ ಚಲಾಯಿಸಿದ ವಿಶಿಷ್ಟ ಅನುಭವ ತಮ್ಮದಾಗಿಸಿಕೊಳ್ಳಬಹುದಾಗಿದೆ.
  • ಎಟಿವಿ ಸವಾರಿ, ಸಾಹಸ: ಎಟಿವಿ ರೈಡ್, ಪೇಂಟ್‌ಬಾಲ್, ಗೋ-ಕಾರ್ಟಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳು ಸರ್ಜಾಪುರ ರಸ್ತೆ, ಯಶವಂತಪುರ ಮತ್ತು ಕನಕಪುರ ರಸ್ತೆಯಲ್ಲಿ ಲಭ್ಯವಿದೆ https://playarena.in/
  • ಹೆಬ್ಬಾಳ ಸರೋವರದಲ್ಲಿ ಪಕ್ಷಿ ವೀಕ್ಷಣೆ: ಹೆಬ್ಬಾಳ ಸರೋವರದ ತಟದಲ್ಲಿ ವಾಯು ವಿಹಾರ ಬೆಂಗಳೂರಿಗರ ನೆಚ್ಚಿನ ಹವ್ಯಾಸವಾಗಿದೆ. ಹಲವು ಬಗೆಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ.
  • ಲುಂಬಿನಿ ಗಾರ್ಡನ್ಸ್: ಲುಂಬಿನಿ ಗಾರ್ಡನ್ಸ್ ಉತ್ತರ ಬೆಂಗಳೂರಿನ ವಾಟರ್ ಥೀಮ್ ಪಾರ್ಕ್ ಮತ್ತು ಮನರಂಜನಾ ಪ್ರದೇಶವಾಗಿದೆ. ಲುಂಬಿನಿ ಉದ್ಯಾನವು ನಾಗವಾರ ಸರೋವರದ ದಡದಲ್ಲಿದೆ. ದೋಣಿ ವಿಹಾರ, ಮನೋರಂಜನಾ ಸವಾರಿ ಮತ್ತು ನೀರಾಟ ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ.
  • ಏರೋ ಇಂಡಿಯಾ: ವೈಮಾನಿಕ ಸಾಹಸ ಹಾರಾಟ, ಪ್ರದರ್ಶನ ಮತ್ತು ವ್ಯಾಪಾರ ಸಭೆಗಳು ಸೇರಿದಂತೆ ಯಲಹಂಕ ವಾಯುಪಡೆಯ ನೆಲೆಯಲ್ಲಿ ನಡೆದ ದ್ವೈವಾರ್ಷಿಕ ಕಾರ್ಯಕ್ರಮ.
  • ಬ್ರೇಕ್ ಔಟ್ ಅನುಭವ: ಬೀಗ ಹಾಕಿದ ಕೊಠಡಿಯಿಂದ ತಪ್ಪಿಸಿಕೊಳ್ಳುವುದನ್ನು ಒಳಗೊಂಡ ಪರಿಕಲ್ಪನೆ ಆಟ. ಕೋರಮಂಗಲದಲ್ಲಿ ಲಭ್ಯವಿದೆ (https://breakout.in/)
  • ಸ್ನೋ ಸಿಟಿ: ಜೆಸಿ ನಗರದಲ್ಲಿರುವ ಕೃತಕ ಒಳಾಂಗಣ ಹಿಮವನ್ನು ಆನಂದಿಸಬಹುದಾದ ಸ್ಥಳ https://snowcityblr.com/
  • ಟಾಕ್ ಟು ಹ್ಯಾಂಡ್: ಲೇಸರ್ ಟ್ಯಾಗ್ ಯುದ್ಧ ಆಡಬಹುದಾದ ತಾಣ, ಜಯನಗರದಲ್ಲಿ ಲಭ್ಯವಿದೆ
  • ಐಪ್ಲೇ: ವೈಟ್‌ಫೀಲ್ಡ್‌ನಲ್ಲಿ ಐಸ್ ಸ್ಕೇಟಿಂಗ್ ಮಾಡಬಹುದಾದ ತಾಣ.
  • ಫ್ಲೈಟ್ 4 ಫ್ಯಾಂಟಸಿ: ಕುಳಿತಲ್ಲೇ ಕಂಪ್ಯೂಟರ್ ಪರದೆಯನ್ನು ನೋಡಿ ವಿಮಾನ ಚಾಲನೆ ಅನುಭವ ಪಡೆಯಬಹುದಾದ ಕೇಂದ್ರ. ಕೋರಮಂಗಲದ ಫೋರಂ ಮಾಲ್ ಒಳಗೆ ಲಭ್ಯವಿದೆ
  • ಫನ್ ವರ್ಲ್ಡ್: ಬೆಂಗಳೂರು ಅರಮನೆಯ ಬಳಿಯ ಜೆ.ಸಿ.ನಗರದಲ್ಲಿ ಇರುವ ಅಮ್ಯೂಸ್‌ಮೆಂಟ್ ಪಾರ್ಕ್.
  • ಗಾಲ್ಫ್: ಬೆಂಗಳೂರಿನಲ್ಲಿ ಹಲವು ಗಾಲ್ಫ್ ಮೈದಾನಗಳಿವೆ. ಲಲಿತ್ ಅಶೋಕ್ ಹೋಟೆಲ್ ಎದುರು ಕುಮಾರಕೃಪಾ ರಸ್ತೆಯಲ್ಲಿ ಬೆಂಗಳೂರು ಗಾಲ್ಫ್ ಕ್ಲಬ್ ನಿರ್ವಹಿಸುವ ಗಾಲ್ಫ್ ಮೈದಾನ ಪ್ರಮುಖವಾದದ್ದಾಗಿದೆ.
 
ಪ್ರಕೃತಿ ಮತ್ತು ವನ್ಯಜೀವಿಗಳು
  • ಕಬ್ಬನ್ ಪಾರ್ಕ್: ಬೆಂಗಳೂರಿನ ಕೇಂದ್ರ ಭಾಗದಲ್ಲಿ 300 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಬ್ಬನ್ ಪಾರ್ಕ್ ಬೆಂಗಳೂರು ನಗರದ ಶ್ವಾಸಕೋಶವಾಗಿದೆ ಎಂದರೆ ತಪ್ಪಾಗಲಾರದು. ವಿಶ್ರಾಂತಿ ಪಡೆಯಲು, ತಂಗಾಳಿ ಆನಂದಿಸಲು ಕಬ್ಬನ್ ಪಾರ್ಕ್ ಅತ್ಯುತ್ತಮ ಸ್ಥಳವಾಗಿದೆ. ಜವಾಹರ್ ಬಾಲ ಭವನದೊಳಗೆ ಆಟಿಕೆ ರೈಲು ಸವಾರಿ ಮಕ್ಕಳಲ್ಲಿ ಜನಪ್ರಿಯ ಆಕರ್ಷಣೆಯಾಗಿದೆ.
  • ಸರ್ಕಾರಿ ಮತ್ಯ್ಸಗಾರ : ಸರ್ಕಾರಿ ಅಕ್ವೇರಿಯಂನಲ್ಲಿ, ಸಂದರ್ಶಕರು 3 ಮಹಡಿಗಳಲ್ಲಿ ಪ್ರದರ್ಶನಕ್ಕಿರುವ ಜಲಚರಗಳನ್ನು ಪ್ರದರ್ಶನಕ್ಕೆ ನೋಡಬಹುದಾಗಿದೆ. ಸೋಮವಾರ ಮತ್ತು ಪರ್ಯಾಯ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.
  • ಲಾಲ್‌ಬಾಗ್: ಲಾಲ್‌ಬಾಗ್ ಸಸ್ಯ ಉದ್ಯಾನ ಬೆಂಗಳೂರಿನ ಎರಡನೇ ಅತಿದೊಡ್ಡ ಉದ್ಯಾನವಾಗಿದೆ (ಕಬ್ಬನ್ ಪಾರ್ಕ್ ನಂತರ) ಸುಮಾರು 188 ಎಕರೆ ಹಸಿರು ಹಾಸು ಹೊಂದಿದೆ. ಲಾಲ್‌ಬಾಗ್ ಸಸ್ಯ ಉದ್ಯಾನವನ್ನು 18 ನೇ ಶತಮಾನದಲ್ಲಿ ಹೈದರ್ ಅಲಿ ಪ್ರಾರಂಭಿಸಿದರು ಮತ್ತು ಅವರ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸಿದರು. ಗಾಜಿನ ಅರಮನೆ, ಸರೋವರ, ಹೂವಿನ ಪ್ರದರ್ಶನಗಳು / ಹಣ್ಣಿನ ಮೇಳಗಳು (ಹಣ್ಣಿನ ಋತುಗಳಲ್ಲಿ ಮಾತ್ರ), ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಸಾಂಸ್ಕೃತಿಕ ಪ್ರದರ್ಶನ, ಬೋನ್ಸಾಯ್ ಗಾರ್ಡನ್, ಹೂ ಗಡಿಯಾರ, ದಾಸವಾಳದ ಉದ್ಯಾನ ಮತ್ತು ಕೆಂಪೇಗೌಡ ವಾಚ್ ಟವರ್ ಪ್ರಮುಖ ಆಕರ್ಷಣೆಗಳಾಗಿವೆ.
  • ಜಯಪ್ರಕಾಶ್ ನಾರಾಯಣ್ ಜೀವವೈವಿಧ್ಯ ಉದ್ಯಾನ: ಯಶವಂತಪುರ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಮತ್ತೀಕೆರೆಯಲ್ಲಿದೆ. 85 ಎಕರೆ ಉದ್ಯಾನವನವು ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ನಂತರದ ಬೆಂಗಳೂರಿನ 3 ನೇ ಅತಿದೊಡ್ಡ ಉದ್ಯಾನವಾಗಿದೆ. ಜೆಪಿ ಪಾರ್ಕ್ ಸಾವಿರಾರು ಸಸ್ಯ ಪ್ರಭೇದಗಳು, ಔಷಧೀಯ ಸಸ್ಯಗಳು, ಹೂಬಿಡುವ ಸಸ್ಯಗಳು, ಒಂದು ಸರೋವರ, ಸಂಗೀತ ಕಾರಂಜಿ, ಸುಸಜ್ಜಿತ ವಾಯು ವಿಹಾರ ಮಾರ್ಗ ಮತ್ತು ಇತರ ಆಕರ್ಷಣೆಗಳಿಂದ ಪ್ರಸಿದ್ಧವಾಗಿದೆ.
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ 260.51 ಚದರ ವಿಸ್ತೀರ್ಣದಲ್ಲಿ ಹರಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬೆಂಗಳೂರು ನಗರಕ್ಕೆ ಹತ್ತಿರದ ರಾಷ್ಟ್ರೀಯ ಉದ್ಯಾನವನವಾಗಿದೆ ಮತ್ತು ಪ್ರವೇಶಿಸಲು ಸುಲಭವಾದ ವನ್ಯಜೀವಿ ತಾಣವಾಗಿದೆ. ಹೆಚ್ಚಿನ ಸಂಖ್ಯೆಯ ಕಾಡು ಪ್ರಾಣಿಗಳು, ಉತ್ತಮವಾಗಿ ನಿರ್ವಹಿಸಲ್ಪಟ್ಟ ಮೃಗಾಲಯ, ಸಫಾರಿಗಳು ಮತ್ತು ಚಿಟ್ಟೆ ಉದ್ಯಾನವನ ಹೊಂದಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಪ್ರತಿದಿನ ತಮ್ಮ ಕುಟುಂಬಗಳೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.
  • ದೊಡ್ಡ ಆಲದ ಮರ: ದೊಡ್ಡ ಆಲದ ಮರ 4 ಶತಮಾನಗಳಷ್ಟು ಹಳೆಯದಾದ ಆಲದ ಮರವಾಗಿದ್ದು 3 ಎಕರೆ ಪ್ರದೇಶದಲ್ಲಿ ಹರಡಿದೆ. ಇದು ಬೆಂಗಳೂರು ನಗರದ ಹೊರವಲಯದಲ್ಲಿರುವ ಜನಪ್ರಿಯ ಆಕರ್ಷಣೆಯಾಗಿದೆ.
  • ಬ್ಯುಗಲ್ ರಾಕ್ ಪಾರ್ಕ್: ಬಸವನಗುಡಿಯಲ್ಲಿ ದೈತ್ಯ ಮರಗಳು ಮತ್ತು ಉದ್ಯಾನಗಳಿರುವ ಉದ್ಯಾನವನವಾಗಿದೆ. ಬಸವನ ಗುಡಿ ದೇವಾಲಯವು ಬಗಲ್ ರಾಕ್ ಪಾರ್ಕ್ ಒಳಗೆ ಇದೆ.
  • ಮುತ್ಯಾಲ ಮಡುವು: ಮುತ್ಯಾಲ ಮಡುವು ಪರ್ಲ್ ವ್ಯಾಲಿ ಎಂದೂ ಕರೆಯಲ್ಪಡುತ್ತದೆ. ವಾರಾಂತ್ಯದ ತಾಣವಾಗಿದೆ. ಮುತ್ಯಾಲ ಮಡುವನ್ನು ಅದರ ಜಲಪಾತ, ಪಕ್ಷಿ ವೀಕ್ಷಣೆ ಮತ್ತು ಶಾಂತ ವಾತಾವರಣಕ್ಕಾಗಿ ಹೆಚ್ಚಾಗಿ ಭೇಟಿ ಮಾಡಲಾಗುತ್ತದೆ.
  • ತಟ್ಟಕೆರೆ ಸರೋವರ: ಕರ್ನಾಟಕ-ತಮಿಳುನಾಡು ಗಡಿಯ ಸಮೀಪವಿರುವ ಸಣ್ಣ ಸರೋವರವಾಗಿದೆ.
  • ಹೇಸರಘಟ್ಟ: ಅಕ್ರಾವತಿ ನದಿಯಿಂದ ನೀರನ್ನು ಸಂಗ್ರಹಿಸಲು ಮತ್ತು ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು 1894 ರಲ್ಲಿ ನಿರ್ಮಿಸಲಾದ ಮಾನವ ನಿರ್ಮಿತ ಸರೋವರವಾಗಿದೆ. ಮಳೆಗಾಲದ ನಂತರ ನೀರಿನ ಮಟ್ಟವು ಸಾಮಾನ್ಯವಾಗಿ ಕಡಿಮೆ ಇರುತ್ತದೆ, ಇದು ಹೆಸರಘಟ್ಟ ಸರೋವರವನ್ನು ವಿಶಾಲವಾದ ಹುಲ್ಲುಗಾವಲು ಪ್ರದೇಶವಾಗಿ ಮಾರ್ಪಡಿಸುತ್ತದೆ. ವಿಶಾಲವಾದ ಹುಲ್ಲುಗಾವಲುಗಳು, ಮೋಡಿಮಾಡುವ ಸೂರ್ಯೋದಯ ವೀಕ್ಷಣೆಗಳು, ಪಕ್ಷಿಗಳನ್ನು ಗುರುತಿಸುವ ಅವಕಾಶಗಳಿಂದಾಗಿ ಬೆಂಗಳೂರಿಗರು ಹೆಸರ ಘಟ್ಟಕ್ಕೆ ದಾಂಗುಡಿಯಿಡುತ್ತಾರೆ.
  • ಬೆಂಗಳೂರಿನ ಇತರ ಜನಪ್ರಿಯ ಉದ್ಯಾನವನಗಳು: ಜಯನಗರದ ಮಾಧವನ್ ಪಾರ್ಕ್ ಮತ್ತು ಸೌತೆಂಡ್ ವೃತ್ತದ ಎನ್.ಆರ್.ಲಕ್ಷ್ಮಣ್ ರಾವ್ ಪಾರ್ಕ್, ಮಲ್ಲೇಶ್ವರಂನ ಭಾಷ್ಯಮ್ ಪಾರ್ಕ್, ಶ್ರೀರಾಮಪುರಂನ ದೇವಯ್ಯ ಪಾರ್ಕ್, ಅಲಸೂರಿನ ಕೆನ್ಸಿಂಗ್ಟನ್ ಪಾರ್ಕ್, ಚಾಮರಾಜಪೇಟೆಯ ಮಕ್ಕಳ ಕೂಟ ಪಾರ್ಕ್ ಬೆಂಗಳೂರಿನ 225+ ಉದ್ಯಾನವನಗಳಲ್ಲಿ ಕೆಲವಾಗಿವೆ.
  • ತೊಟ್ಟಿಕಲ್ಲು: ಕನಕಪುರ ರಸ್ತೆಯಿಂದ ಬೆಂಗಳೂರಿನಿಂದ ದಕ್ಷಿಣಕ್ಕೆ 30 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಜಲಪಾತವಾಗಿದೆ.
  • ಬೆಂಗಳೂರಿನಲ್ಲಿ ಜನಪ್ರಿಯ ಸರೋವರಗಳು ಮತ್ತು ಟ್ಯಾಂಕ್‌ಗಳು: ಸ್ಯಾಂಕಿ ಟ್ಯಾಂಕ್, ಅಲಸೂರು ಸರೋವರ, ಮಡಿವಾಳ ಸರೋವರ ಮತ್ತು ಬೆಳ್ಳಂದೂರು ಸರೋವರ, ಹೆಬ್ಬಾಳ ಕೆರೆ ಇತ್ಯಾದಿ.
 
ಕಲೆ ಮತ್ತು ಸಂಸ್ಕೃತಿ
  • ರಂಗಶಂಕರ: ಜೆ.ಪಿ.ನಗರದಲ್ಲಿ ಚಿತ್ರನಟ ಶಂಕರನಾಗ್ ಅವರ ನೆನಪಿಗಾಗಿ ನಿರ್ಮಿಸಲಾದ ರಂಗಶಂಕರ ನಾಟಕ ಪ್ರದರ್ಶನಕ್ಕೆ ಜನಪ್ರಿಯವಾಗಿದೆ. ರಂಗಭೂಮಿ ಉತ್ಸವಗಳು ಮತ್ತು ನಾಟಕಗಳನ್ನು ಅನುಭವಿಸಲು ಉತ್ತಮ ಸ್ಥಳವಾಗಿದೆ http://www.rangashankara.org/
  • ರವೀಂದ್ರ ಕಲಾಕ್ಷೇತ್ರ: ನಾಟಕೀಯ ಚಟುವಟಿಕೆಗಳು ಮತ್ತು ಪ್ರದರ್ಶನಗಳ ಕೇಂದ್ರ
  • ಕರ್ನಾಟಕ ಚಿತ್ರಕಲಾ ಪರಿಷತ್: ಶಾಸ್ತ್ರೀಯ ವರ್ಣಚಿತ್ರಗಳು, ಕಲೆ ಮತ್ತು ಕರಕುಶಲ ವಸ್ತುಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಚಿತ್ರಸಂತೆ / ಪ್ರದರ್ಶನವನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ.
  • ನೃತ್ಯ ಗ್ರಾಮ: ನೃತ್ಯ ಗ್ರಾಮವು ಹೆಸರಘಟ್ಟದಲ್ಲಿರುವ ವಸತಿ ನೃತ್ಯ ಶಾಲೆಯಾಗಿದ್ದು, ಇದು ಒಡಿಸ್ಸಿ ನೃತ್ಯ ಪ್ರಕಾರಗಳನ್ನು ಕಲಿಸುತ್ತದೆ. ಸಂದರ್ಶಕರಿಗೆ ನೃತ್ಯ ಗ್ರಾಮವನ್ನು ಭೇಟಿ ಮಾಡಲು ಮತ್ತು ವಿದ್ಯಾರ್ಥಿಗಳು ಕಲಿಯುವುದನ್ನು ವೀಕ್ಷಿಸಲು ಅವಕಾಶವಿದೆ. (ಸಮಯ: ಸಾರ್ವಜನಿಕ ರಜಾದಿನಗಳು ಮತ್ತು ಸೋಮವಾರಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ)
  • ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್: ಅರಮನೆ ರಸ್ತೆಯಲ್ಲಿ 2009 ರಲ್ಲಿ ಪ್ರಾರಂಭವಾದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ರಾಜಾ ರವಿವರ್ಮ, ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ವರ್ಣಚಿತ್ರಗಳು ಸೇರಿದಂತೆ 500+ ಪ್ರದರ್ಶನಗಳಿಗೆ ನೆಲೆಯಾಗಿದೆ.
  • ಹಾಸ್ಯ ಭಾಷಣಗಳು: ನಗರದಾದ್ಯಂತ ಹಲವಾರು ಹಾಸ್ಯ ಭಾಷಣಗಳು (ಸ್ಟಾಂಡ್ ಅಪ್ ಕಾಮೆಡಿ) ನಡೆಯುತ್ತವೆ. ವಿವರಗಳನ್ನು ಬುಕ್‌ಮೈಶೋ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಪಡೆಯಬಹುದು.
 
ಧಾರ್ಮಿಕ ಸ್ಥಳಗಳು
  • ಬುಲ್ ಟೆಂಪಲ್ (ನಂದಿ ದೇವಸ್ಥಾನ), ಬಸವನಗುಡಿ: ಬಿಗ್ ಬುಲ್ ಟೆಂಪಲ್ ಅಥವಾ ದೊಡ್ಡ ಬಸವನ ಗುಡಿ ಎಂಬುದು ನಂದಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಇದರಿಂದ ಬೆಂಗಳೂರಿನ ಬಸವನಗುಡಿ ಪ್ರದೇಶಕ್ಕೆ ತನ್ನ ಹೆಸರು ಬಂದಿದೆ. ಬಸವನಗುಡಿಯಲ್ಲಿ ನಂದಿ ದೇವಾಲಯವನ್ನು 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕೆಂಪೇಗೌಡರು ಕಟ್ಟಿಸಿದರು. ನಂದಿ (ಬುಲ್) ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದ್ದು 15 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದು ವಿಶ್ವದ ಅತಿದೊಡ್ಡ ನಂದಿ ವಿಗ್ರಹಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.
  • ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನ, ರಾಜಾಜಿನಗರ: ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) 1966 ರಲ್ಲಿ ಸ್ಥಾಪನೆಯಾದ ಒಂದು ಧಾರ್ಮಿಕ ಸಂಘಟನೆಯಾಗಿದೆ. ಇಸ್ಕಾನ್ ವಿಶ್ವದಾದ್ಯಂತ ಹಲವಾರು ದೇವಾಲಯಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ನಡೆಸುತ್ತಿದೆ. ರಾಜಾಜಿನಗರದಲ್ಲಿರುವ ಇಸ್ಕಾನ್ ಬೆಂಗಳೂರು ಕರ್ನಾಟಕದ ಪ್ರಮುಖ ಇಸ್ಕಾನ್ ದೇವಾಲಯವಾಗಿದೆ.
  • ಸೇಕ್ರೆಡ್ ಹಾರ್ಟ್ ಚರ್ಚ್, ಬೆಂಗಳೂರು: ಸೇಕ್ರೆಡ್ ಹಾರ್ಟ್ 1874 ರಲ್ಲಿ ನಿರ್ಮಿಸಲಾದ ಬೆಂಗಳೂರು ನಗರದ ಜನಪ್ರಿಯ ಕ್ಯಾಥೋಲಿಕ್ ಚರ್ಚ್ ಆಗಿದೆ. ಸೇಕ್ರೆಡ್ ಹಾರ್ಟ್ ಚರ್ಚ್ ಸುಸಜ್ಜಿತ, ಶಾಂತಿಯುತ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಚರ್ಚ್ ಕ್ಯಾಂಪಸ್ ಆಗಿದೆ, ಇದು ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುತ್ತದೆ.
  • ಸೇಂಟ್ ಪ್ಯಾಟ್ರಿಕ್ ಚರ್ಚ್, ಬೆಂಗಳೂರು: ಸೇಂಟ್ ಪ್ಯಾಟ್ರಿಕ್ ಚರ್ಚ್ 1841ರಲ್ಲಿ ಸ್ಥಾಪಿತವಾದ ಬ್ರಿಗೇಡ್ ರಸ್ತೆಯಲ್ಲಿರುವ ಬೆಂಗಳೂರು ನಗರದ ಜನಪ್ರಿಯ ಚರ್ಚ್ ಆಗಿದೆ. ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು ಮೂಲತಃ ವರ್ಜಿನ್ ಮೇರಿ ಮತ್ತು ಆರ್ಚಾಂಗೆಲ್ ಮೈಕೆಲ್ ಅವರಿಗೆ ಸಮರ್ಪಿಸಲಾಗಿತ್ತು. ಇದನ್ನು “ಚರ್ಚ್ ಆಫ್ ದಿ ಅಸಂಪ್ಷನ್” ಎಂದು ಗುರುತಿಸಲಾಗಿದೆ. ಆದರೆ ಐರಿಶ್ ಸೈನಿಕರ ತುಕಡಿಗಳು ಚರ್ಚ್ ಬಳಿ ಉಳಿದುಕೊಂಡಿದ್ದರಿಂದ ಇದು ಸೇಂಟ್ ಪ್ಯಾಟ್ರಿಕ್ ಚರ್ಚ್ ಎಂದು ಕಾಲಕ್ರಮೇಣ ಜನಪ್ರಿಯವಾಯಿತು. ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು 2000 ಮತ್ತು 2012 ರಲ್ಲಿ ನವೀಕರಿಸಲಾಯಿತು.
  • ಹೋಲಿ ಟ್ರಿನಿಟಿ ಚರ್ಚ್: ಹೋಲಿ ಟ್ರಿನಿಟಿ ಚರ್ಚ್ ಅನ್ನು 1852 ರಲ್ಲಿ ಬ್ರಿಟಿಷ್ ಸರ್ಕಾರವು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್ ಸೈನಿಕರ ಅನುಕೂಲಕ್ಕಾಗಿ ನಿರ್ಮಿಸಿತು. ಹೋಲಿ ಟ್ರಿನಿಟಿ ಚರ್ಚ್ ಇಂಗ್ಲಿಷ್ ನವೋದಯ (ರಿನೈಸ್ಸಾನ್ಸ್ ) ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು ಏಕ ಕಾಲದಲ್ಲಿ 700 ಕ್ಕೂ ಹೆಚ್ಚು ಜನರಿಗೆ ಪ್ರಾರ್ಥನಾ ಅವಕಾಶ ಕಲ್ಪಿಸುತ್ತದೆ.
  • ಸಂತ ಮೇರಿ ಬೆಸಿಲಿಕಾ: ಸಂತ ಮೇರಿ ಬೆಸಿಲಿಕಾ ಬೆಂಗಳೂರಿನ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ, ಇದನ್ನು ಸೆಂಜಿ ಗ್ರಾಮದಿಂದ (ತಮಿಳುನಾಡಿನಲ್ಲಿದೆ) ಬಂದ ತಮಿಳು ಕ್ರಿಶ್ಚಿಯನ್ ವಲಸಿಗರು ನಿರ್ಮಿಸಿದ್ದಾರೆ. ಸಂತ ಮೇರಿ ಬೆಸಿಲಿಕಾ ವನ್ನು 17 ನೇ ಶತಮಾನದಲ್ಲಿ ಗೋಥಿಕ್ ಶೈಲಿಯ ವಾಸ್ತುಶಿಲ್ಪ, ಅಲಂಕಾರಿಕ ವಸ್ತುಗಳು, ಬಣ್ಣದ ಗಾಜಿನ ಕಿಟಕಿಗಳು ಮತ್ತು ಭವ್ಯವಾದ ಕಮಾನುಗಳನ್ನು ಬಳಸಿ ನಿರ್ಮಿಸಲಾಯಿತು. ಸೇಂಟ್ ಮೇರಿಸ್ ಬೆಸಿಲಿಕಾ ಮುಖ್ಯ ಗೋಪುರವು ಸುಮಾರು 160 ಅಡಿ ಎತ್ತರವಿದೆ. ನಮ್ಮ ತಾಯಿ ಮೇರಿಯ ಪ್ರತಿಮೆಯನ್ನು ಸೀರೆಯಲ್ಲಿ ಹೊದಿಸಿ ಪ್ರತಿದಿನ ಪೂಜಿಸಲಾಗುತ್ತದೆ. ಬಾಲ ಯೇಸುವನ್ನು ಹಿಡಿದಿರುವ ತಾಯಿ ಮೇರಿಯ ಪ್ರತಿಮೆ ಮೋಡಿ ಮಾಡುವ ಅಪ್ಯಾಯಮಾನ ದೃಶ್ಯವಾಗಿದೆ. ಸಂತ ಮೇರಿ ಬೆಸಿಲಿಕಾವನ್ನು ‘ಮೈನರ್ ಬೆಸಿಲಿಕಾ’ ದರ್ಜೆಗೆ ಮೇಲೇರಿಸಲಾಗಿದೆ. ಈ ಸ್ಥಾನಮಾನವನ್ನು ಸಾಧಿಸಿದ ಕೆಲವೇ ಚರ್ಚುಗಳಲ್ಲಿ ಒಂದಾಗಿದೆ. ವಾರ್ಷಿಕ ಹಬ್ಬ: ಸಂತ ಮೇರಿ ಬೆಸಿಲಿಕಾದಲ್ಲಿ ಸೇಂಟ್ ಮೇರಿಯ ಜನ್ಮದಿನವಾದ ಸೆಪ್ಟೆಂಬರ್ 8 ರಂದು ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ.
  • ಗುರು ಸಿಂಗ್ ಸಭಾ ಗುರುದ್ವಾರ: ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಬೆಂಗಳೂರು ನಗರದ ಅತಿದೊಡ್ಡ ಸಿಖ್ ಧರ್ಮಪೀಠವಾಗಿದೆ. ಶ್ರೀ ಗುರು ಸಿಂಗ್ ಸಭಾ ಗುರುದ್ವಾರವು ಅಲಸೂರು ಸರೋವರದ ದಡದಲ್ಲಿದೆ. ಶ್ರೀ ಗುರು ಸಿಂಗ್ ಸಭಾ ಗುರುದ್ವಾರವನ್ನು 1943 ರಲ್ಲಿ ನಿರ್ಮಿಸಲಾಯಿತು ಮತ್ತು ಮೊದಲ ಮಹಡಿಯನ್ನು ಸೇರಿಸಿ 1975 ರಲ್ಲಿ ನವೀಕರಿಸಲಾಯಿತು.
  • ಜಾಮಿಯಾ ಮಸೀದಿ, ಕೆಆರ್ ಮಾರುಕಟ್ಟೆ: ಜಾಮಿಯಾ ಮಸೀದಿ ಬೆಂಗಳೂರಿನ ಅತ್ಯಂತ ಹಳೆಯ ಮಸೀದಿಯಾಗಿದ್ದು, ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕೆ ಆರ್ ಮಾರ್ಕೆಟ್‌ನಲ್ಲಿದೆ. 18 ನೇ ಶತಮಾನದ ಜಾಮಿಯಾ ಮಸೀದಿ ಎರಡು ಭವ್ಯವಾದ ಮಿನಾರ್ ಮತ್ತು ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿದೆ.
  • ಸೋಮೇಶ್ವರ ದೇವಸ್ಥಾನ: ವಿಜಯನಗರ ದೇವಾಲಯದ ಕಾಲದಲ್ಲಿ ನಿರ್ಮಿಸಲಾದ ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಅಲಸೂರಿನ ಶ್ರೀ ಸೋಮೇಶ್ವರ ದೇವಸ್ಥಾನ. ಎತ್ತರದ ಗೋಪುರ, 48 ಸ್ತಂಭಗಳು ಮತ್ತು ಸಾಕಷ್ಟು ಶಿಲ್ಪಕಲೆಗಳಿಂದ ಹೆಸರುವಾಸಿಯಾಗಿದೆ.
  • ಬಿಲಾಲ್ ಮಸೀದಿ, ಬೆಂಗಳೂರು: ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರಮುಖ ಮಸೀದಿಗಳಲ್ಲಿ ಬಿಲಾಲ್ ಮಸೀದಿ ಕೂಡ ಒಂದು. ಬಿಲಾಲ್ ಮಸೀದಿಯನ್ನು ‘ಮಸೀದಿ ಇ ಈದ್ಗಾ ಬಿಲಾಲ್’ ಎಂದೂ ಕರೆಯುತ್ತಾರೆ. ಹಸಿರು ಗುಮ್ಮಟ ಮತ್ತು ನಾಲ್ಕು ಗೋಪುರಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಮಸೀದಿಯು ಅದರ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ನೋಡಲು ಕೂಡ ಸುಂದರವಾಗಿ ಕಾಣುವ ತಾಣವಾಗಿದೆ.
  • ಆರ್ಟ್ ಆಫ್ ಲಿವಿಂಗ್: ಆರ್ಟ್ ಆಫ್ ಲಿವಿಂಗ್ ಧ್ಯಾನ ಅಭ್ಯಾಸಗಳು, ಯೋಗ, ಆಯುರ್ವೇದ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಿಗೆ ಜನಪ್ರಿಯವಾದ ಖಾಸಗಿ ಸಂಸ್ಥೆಯಾಗಿದೆ. ಆರ್ಟ್ ಆಫ್ ಲಿವಿಂಗ್ ಅನ್ನು ಶ್ರೀ ಶ್ರೀ ರವಿಶಂಕರ್ ಸಂಸ್ಥಾಪಿಸಿದರು ಮತ್ತು ಅದರ ಜಾಗತಿಕ ಪ್ರಧಾನ ಕಛೇರಿ ಬೆಂಗಳೂರಿನ ಹೊರವಲಯದ ಕನಕಪುರದಲ್ಲಿ ಇದೆ.
  • ರಾಮಕೃಷ್ಣ ಆಶ್ರಮ: ರಾಮಕೃಷ್ಣ ಆಶ್ರಮವು ಶ್ರೀ ರಾಮಕೃಷ್ಣ ಪರಮಹಂಸರು ಸ್ಥಾಪಿಸಿದ ಹಿಂದೂ ಮಠವಾಗಿದ್ದು ರಾಮಕೃಷ್ಣ ಮಿಷನ್‌ನ ಭಾಗವಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರು ಅವರು 19 ನೇ ಶತಮಾನದ ಸಂತರಾಗಿದ್ದರು ಮತ್ತು ವಿವಿಧ ಸಾಮಾಜಿಕ ಸುಧಾರಣೆಗಳನ್ನುಜಾರಿಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. ರಾಮಕೃಷ್ಣ ಆಶ್ರಮ ಸಂಘಟನೆಯು ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನಡೆಸುತ್ತಿದೆ. ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮ ಬೆಂಗಳೂರು ನಗರದ ಪ್ರಮುಖ ಆದ್ಯಾತ್ಮಿಕ ಕೇಂದ್ರವಾಗಿದೆ.
  • ಪಿರಮಿಡ್ ವ್ಯಾಲಿ: ಪಿರಮಿಡ್ ಕಣಿವೆ ಬೆಂಗಳೂರು ನಗರದ ದಕ್ಷಿಣದಲ್ಲಿರುವ ಒಂದು ಆಧ್ಯಾತ್ಮಿಕ ಕೇಂದ್ರವಾಗಿದೆ, ಇದು ದೈತ್ಯ ಪಿರಮಿಡ್ ಆಕಾರದ ಧ್ಯಾನ ಕೇಂದ್ರಕ್ಕೆ ಜನಪ್ರಿಯವಾಗಿದೆ.
  • ಯಲಹಂಕ: ನರಸಿಂಹ, ವೇಣುಗೋಪಾಲಸ್ವಾಮಿ, ವಿಶ್ವನಾಥೇಶ್ವರ, ವೀರನ್ನಸ್ವಾಮಿ, ನಾಗೇಶ್ವರ, ಪಾಂಡುರಂಗಸ್ವಾಮಿ ದೇವಾಲಯಗಳು ಮತ್ತು ಮೂರು ಅಂಜನೇಯ ದೇವಾಲಯಗಳಿಗೆ ಹೆಸರುವಾಸಿಯಾಗಿದೆ
  • ವೈಟ್ ಫೀಲ್ಡ್: ತಂತ್ರಜ್ಞಾನ ಪಾರ್ಕುಗಳು ಮತ್ತು ಸತ್ಯ ಸಾಯಿ ಪ್ರಶಾಂತಿ ನಿಲಯಕ್ಕೆ ಹೆಸರುವಾಸಿಯಾಗಿದೆ.
  • ವಸಂತಪುರ: ವಸಂತ ವಲ್ಲಭರಾಯಸ್ವಾಮಿ ದೇವಸ್ಥಾನಕ್ಕೆ ನೆಲೆಯಾಗಿದೆ.
  • ಸೊಂಡೆಕೊಪ್ಪ: ಚನ್ನಕೇಶವ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
  • ಸೋಮನಹಳ್ಳಿ: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಗೆ ಹೆಸರುವಾಸಿಯಾಗಿದೆ.
  • ಸಿಂಗಾಪುರ: ವರದರಾಜ ದೇವಸ್ಥಾನಕ್ಕೆ ನೆಲೆಯಾಗಿದೆ
  • ಸರ್ಜಾಪುರ: ಕೊಡಂದರಾಮ ದೇವಸ್ಥಾನಕ್ಕೆ ನೆಲೆಯಾಗಿದೆ
  • ಕೆ.ಆರ್.ಪುರಂ: ಕೃಷ್ಣರಾಜ ಪುರಂ ಅದರ ತೂಗು ಸೇತುವೆ, ಮಹಾಬಲೇಶ್ವರ ದೇವಸ್ಥಾನ ಮತ್ತು ಶ್ರೀ ರಾಮ ದೇವಸ್ಥಾನಕ್ಕೆ ಜನಪ್ರಿಯವಾಗಿದೆ.
  • ಕೆಂಚನಹಳ್ಳಿ: ದ್ರಾವಿಡ ಶೈಲಿಯ ರಾಜರಾಜೇಶ್ವರಿ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಹತ್ತಿರದ ಓಂಕಾರ್ ಬೆಟ್ಟಗಳ ಮೇಲಿರುವ ದೊಡ್ಡ ಆಲದ ಮರ ಜನಪ್ರಿಯ ಆಕರ್ಷಣೆಯಾಗಿದೆ.
  • ಕಡುಗೋಡಿ: ಹೊಯ್ಸಳ ಶೈಲಿಯ ಕಾಶಿ ವಿಶ್ವೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಚಿಕ್ಕಜಾಲ: ಹೊಯ್ಸಳ ಯುಗದ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಬೇಗೂರು: ನಾಗೇಶ್ವರ ದೇವಸ್ಥಾನ ಮತ್ತು ಚೋಳೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಹುಳಿಮಾವು: ನೈಸರ್ಗಿಕ ಬಂಡೆಗಳು ಮತ್ತು ಗುಹೆ ಕೆಳಗಿರುವ ದೇವಾಲಯಕ್ಕೆ ಹೆಸರುವಾಸಿಯಾಗಿದೆ
  • ಅಗರ: ವೆಂಕಟರಮಣ, ರಾಮ, ಸೋಮೇಶ್ವರ, ಗಣೇಶ ಮತ್ತು ಕರಗದಮ್ಮ ದೇವಾಲಯಗಳಿಗೆ ನೆಲೆಯಾಗಿದೆ.
  • ಐಗಂಡಪುರ: ಧರ್ಮೇಶ್ವರ ದೇವಸ್ಥಾನ ಮತ್ತು ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಅನೆಕಲ್: ತಿಮ್ಮರಾಯಸ್ವಾಮಿ, ಆದಿನಾರಾಯಣ, ಅಮೃತ ಮಲ್ಲಿಕಾರ್ಜುನ, ಚನ್ನಕೇಶವ ಮತ್ತು ಭವಾನಿಶಂಕರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.
  • ಸೇಂಟ್ ಲ್ಯೂಕ್ಸ್ ಇಗರ್ಜಿ, ಚಾಮರಾಜಪೇಟೆ: ಕೆಆರ್ ಮಾರುಕಟ್ಟೆ ಪ್ರದೇಶದ ಹಳೆಯ ಚರ್ಚ್
  • ಕೋಟೆ ವೆಂಕಟರಮಣ ದೇವಸ್ಥಾನ: ಕೆ.ಆರ್ ಮಾರುಕಟ್ಟೆಯಲ್ಲಿ ಕೆ.ಆರ್ ರಸ್ತೆಯಲ್ಲಿದೆ, ಕೋಟೆ ವೆಂಕಟರಮಣ ದೇವಾಲಯವು 17 ನೇ ಶತಮಾನದ ದ್ರಾವಿಡ ಮತ್ತು ವಿಜಯನಗರ ಶೈಲಿಯ ದೇವಾಲಯವಾಗಿದ್ದು, ವೆಂಕಟೇಶ್ವರನನ್ನ ಪೂಜಿಸಲಾಗುತ್ತದೆ.
  • ಮಸೀದಿ-ಎ-ಖಾದ್ರಿಯಾ: ಮಿಲ್ಲರ್ಸ್ ರಸ್ತೆಯಲ್ಲಿರುವ ಒಂದು ಸುಂದರವಾದ ಮಸೀದಿ
  • ಶಿಶು ಜೀಸಸ್ ಚರ್ಚ್: ವಿವೇಕ ನಗರದಲ್ಲಿ ಇತ್ತೀಚೆಗೆ ನಿರ್ಮಿಸಲಾದ ರೋಮನ್ ಕ್ಯಾಥೊಲಿಕ್ ಚರ್ಚ್.
  • ರಂಗನಾಥಸ್ವಾಮಿ ದೇವಸ್ಥಾನ: ರಾಜಜಿನಗರದಲ್ಲಿ 16 ನೇ ಶತಮಾನದ ವಿಜಯನಗರ ಶೈಲಿಯ ದೇವಾಲಯ.
  • ರಾಗಿಗುಡ್ಡ ದೇವಸ್ಥಾನ: ಜಯನಗರ 9 ನೇ ಬ್ಲಾಕ್‌ನಲ್ಲಿರುವ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನವು ಸಣ್ಣ ಗುಡ್ಡದ ಮೇಲಿದ್ದು, ಸುತ್ತ ಮುತ್ತಲಿನಲ್ಲಿ ಬಹಳ ಜನಪ್ರಿಯವಾಗಿದೆ.
ವಸ್ತು ಸಂಗ್ರಹಾಲಯಗಳು
  • ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ (ವಿಐಟಿಎಂ) ಕರ್ನಾಟಕದ ಅತ್ಯಂತ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ವಸ್ತುಸಂಗ್ರಹಾಲಯವಾಗಿದೆ. ಕರ್ನಾಟಕದಾದ್ಯಂತ ಹಲವಾರು ಸಂಕೀರ್ಣ ನಿರ್ಮಾಣ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಇಂಜಿನಿಯರ್ ಹಾಗು ಮೈಸೂರಿನ ದಿವಾನರಾಗಿದ್ದ, ಭಾರತ ರತ್ನ ಪ್ರಶಸ್ತಿ ವಿಜೇತ ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಈ ಸಂಗ್ರಹಾಲಯಕ್ಕೆ ಹೆಸರಿಡಲಾಗಿದೆ
  • ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ: ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವಾಯುಯಾನ ಮತ್ತು ವೈಮಾನಿಕ ತಂತ್ರಜ್ಞಾನಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಕಟಿಬದ್ಧವಾಗಿದೆ. ಬೆಂಗಳೂರಿನಲ್ಲಿರುವ ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ ಸ್ವಾತಂತ್ರ್ಯದ ನಂತರ ಭಾರತದ ವಾಯುಯಾನ ಕ್ಷೇತ್ರದಲ್ಲಿ ಆದ ವಿಕಾಸವನ್ನು ಪ್ರದರ್ಶಿಸುತ್ತದೆ. 2001 ರಲ್ಲಿ ಸ್ಥಾಪನೆಯಾದ ಎಚ್‌ಎಎಲ್ ಏರೋಸ್ಪೇಸ್ ವಸ್ತುಸಂಗ್ರಹಾಲಯವು ವಾಯುಯಾನ ಉತ್ಸಾಹಿಗಳನ್ನು ಕೈಬೀಸಿ ಕರೆಯುತ್ತದೆ.
  • ಸರ್ಕಾರಿ ವಸ್ತುಸಂಗ್ರಹಾಲಯ, ಬೆಂಗಳೂರು: ಬೆಂಗಳೂರಿನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯ ದಕ್ಷಿಣ ಭಾರತದ ಎರಡನೇ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವಾಗಿದೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಹಲವಾರು ಪುರಾತತ್ವ ಮತ್ತು ಭೌಗೋಳಿಕ ಕಲಾಕೃತಿಗಳಿಗೆ ನೆಲೆಯಾಗಿದೆ. ಇಲ್ಲಿ ಮೊದಲಿನ ಕನ್ನಡ ಶಾಸನವಾದ ಹಲ್ಮಿಡಿ ಶಾಸನವನ್ನು ಇಲ್ಲಿ ಸುರಕ್ಷಿತವಾಗಿಡಲಾಗಿದೆ.
  • ನಿಮ್ಹಾನ್ಸ್ ಮೆದುಳು ಸಂಗ್ರಹಾಲಯ: ವೈದ್ಯಕೀಯ ವಿಜ್ಞಾನ ಕುರಿತ ಸಂಗ್ರಹಾಲಯವಾಗಿದ್ದು ಲಕ್ಕಸಂದ್ರದ ನಿಮ್ಹಾನ್ಸ್ (ರಾಷ್ಟೀಯ ಮಾನಸಿಕ ಅರೋಗ್ಯ ಮತ್ತು ವಿಜ್ಞಾನ ಸಂಸ್ಥೆ) ಕ್ಯಾಂಪಸ್‌ನಲ್ಲಿದೆ. ಸಂಗ್ರಹಾಲಯದಲ್ಲಿಮಾನವ ಮೆದುಳಿನ ಮಾದರಿಗಳನ್ನು ನೋಡಬಹುದಾಗಿದೆ. ಶನಿವಾರ ಮತ್ತು ಬುಧವಾರದಂದು ಮಾರ್ಗದರ್ಶಿ ಪ್ರವಾಸವನ್ನು ನಡೆಸಲಾಗುತ್ತದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ. ಭಾನುವಾರ, ರಜಾದಿನಗಳು ಮತ್ತು 2 ನೇ ಶನಿವಾರ ರಜೆ. ಉಚಿತ ಪ್ರವೇಶವಿದೆ.
  • ಕೆಂಪೇಗೌಡ ಮ್ಯೂಸಿಯಂ: ಮಾಯೊ ಹಾಲ್‌ನಲ್ಲಿರುವ ಕೆಂಪೇಗೌಡ ಮ್ಯೂಸಿಯಂ ಬೆಂಗಳೂರು ನಗರದ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.
  • ಕರ್ನಾಟಕ ಜಾನಪದ ವಸ್ತುಸಂಗ್ರಹಾಲಯ: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಾನಪದ ವಸ್ತುಸಂಗ್ರಹಾಲಯ ಜಾನಪದ ಹಾಡು ಮತ್ತು ನೃತ್ಯಗಳ ಬೃಹತ್ ಸಂಗ್ರಹವಿದೆ.
  • ಮದ್ರಾಸ್ ಸ್ಯಾಪ್ಪರ್ಸ್ ಮ್ಯೂಸಿಯಂ: ಮದ್ರಾಸ್ ಎಂಜಿನಿಯರ್ ಗ್ರೂಪ್‌ನ (1803 ರಲ್ಲಿ ಸ್ಥಾಪನೆಯಾಯಿತು ಮತ್ತು ಸಪ್ಪರ್ಸ್ ಎಂದು ಕರೆಯಲ್ಪಡುತಿತ್ತು). ಇತಿಹಾಸವನ್ನು ಪ್ರದರ್ಶಿಸುವ ಮಿಲಿಟರಿ ಸಂಗ್ರಹಾಲಯವಾಗಿದೆ. ಮದ್ರಾಸ್ ಸ್ಯಾಪ್ಪರ್ಸ್ ಭಾರತೀಯ ಸೇನೆಯ ಎಂಜಿನಿಯರ್‌ಗಳ ದಳದ ಅತ್ಯಂತ ಹಳೆಯ ರೆಜಿಮೆಂಟ್. ಸಂಗ್ರಹಾಲಯ ರೆಜಿಮೆಂಟಿನ ಇತಿಹಾಸ ಮತ್ತು ಸಾಧನೆಗಳು ಮತ್ತು ರೆಜಿಮೆಂಟ್ ಬಳಸುವ ರಕ್ಷಾಕವಚ, ವಿವಿಧ ಪದಕಗಳು, ಉಡುಪುಗಳು ಮತ್ತು ಕ್ರೀಡಾ ಗ್ಯಾಲರಿಯನ್ನು ಪ್ರದರ್ಶಿಸುತ್ತದೆ. ಮದ್ರಾಸ್ ಸ್ಯಾಪ್ಪರ್ಸ್ ವಸ್ತುಸಂಗ್ರಹಾಲಯವು ಸಾರ್ವಜನಿಕರಿಗೆ ಮುಕ್ತವಾಗಿಲ್ಲ ಮತ್ತು ಸೈನ್ಯದ ವಿಶೇಷ ಅನುಮತಿ ಇದ್ದರೆ ಮಾತ್ರ ಪ್ರವೇಶಿಸಬಹುದಾಗಿದೆ.
  • ಲಾ ಮ್ಯೂಸಿಯಂ: ಲಾ ಮ್ಯೂಸಿಯಂನಲ್ಲಿ ಭಾರತದ ಸಂವಿಧಾನದ ಮೂಲ ಪ್ರತಿ, ಕಾನೂನು ವೃತ್ತಿ, ಚಿಹ್ನೆಗಳು, ಮುದ್ರೆಗಳು ಮತ್ತು ಪುಸ್ತಕಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ದಾಖಲೆಗಳಿವೆ. ಲಾ ಮ್ಯೂಸಿಯಂ ಹೈಕೋರ್ಟ್‌ನ ಇತಿಹಾಸ ಮತ್ತು ನ್ಯಾಯಾಲಯಗಳ ಅಭಿವೃದ್ಧಿಯನ್ನು ಸಹ ತೋರಿಸುತ್ತದೆ.
  • ಅಂಚೆಚೀಟಿ ಸಂಗ್ರಹಾಲಯ: ವಿಧಾನ ಸೌಧದ ಬಳಿಯ ಬೆಂಗಳೂರು ಜನರಲ್ ಪೋಸ್ಟ್ ಆಫೀಸ್‌ನ ಮೊದಲ ಮಹಡಿಯಲ್ಲಿದೆ, ವಿವಿಧ ಕಾಲಾವಧಿಯಿಂದ ಹಲವಾರು ಅಂಚೆಚೀಟಿಗಳನ್ನು ಪ್ರದರ್ಶಿಸುತ್ತದೆ.
  • ಗಾಂಧಿ ಭವನ: ಕುಮಾರಕೃಪ ಪೂರ್ವದಲ್ಲಿರುವ ಮಹಾತ್ಮ ಗಾಂಧಿಗೆ ಮೀಸಲಾದ ವಸ್ತು ಸಂಗ್ರಹಾಲಯವಾಗಿದೆ.
  • ಲೆಜೆಂಡ್ಸ್ ಮೋಟಾರ್‌ಸೈಕಲ್ ಮ್ಯೂಸಿಯಂ: ವೀಲರ್ಸ್ ರಸ್ತೆಯಲ್ಲಿದೆ, ಲೆಜೆಂಡ್ಸ್ ಮೋಟಾರ್‌ಸೈಕಲ್ ಮ್ಯೂಸಿಯಂ ಇನ್ನೂ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವ 20 ಕ್ಕೂ ಹೆಚ್ಚು ವಿಂಟೇಜ್ ಮೋಟರ್‌ಸೈಕಲ್‌ಗಳ ಸಂಗ್ರಹವನ್ನು ಪ್ರದರ್ಶಿಸುತ್ತದೆ. ಕೆಲವು ಮೋಟರ್ ಸೈಕಲ್‌ಗಳು ಸುಮಾರು ಒಂದು ಶತಮಾನದಷ್ಟು ಹಳೆಯವು.
  • ಜವಾಹರಲಾಲ್ ನೆಹರು ತಾರಾಲಯ: ಹೈ ಗ್ರೌಂಡ್ಸ್‌ನ ಸ್ಯಾಂಕಿ ರಸ್ತೆಯಲ್ಲಿದೆ, ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ) ವಿಜ್ಞಾನವನ್ನು ಜನಪ್ರಿಯಗೊಳಿಸಲು ಮತ್ತು ಸಂದರ್ಶಕರಿಗೆ (ವಿಶೇಷವಾಗಿ ಶಾಲಾ ಮಕ್ಕಳು) ತಾರಾ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. https://www.taralaya.org/
ಇತರ ಆಕರ್ಷಣೆಗಳು
  • ಟೆಕ್ ಪಾರ್ಕ್‌ಗಳು: ಬೆಂಗಳೂರಿನಲ್ಲಿ ಹಲವಾರು ಐಟಿ ಪಾರ್ಕ್‌ಗಳಿವೆ, ಅವುಗಳಲ್ಲಿ ಪ್ರಮುಖವಾದವು ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ಮತ್ತು ವೈಟ್‌ಫೀಲ್ಡ್‌ನಲ್ಲಿವೆ
  • ಶಾಪಿಂಗ್ ಪ್ರದೇಶಗಳು: ಬ್ರಿಗೇಡ್ ರಸ್ತೆ, ಕಮರ್ಷಿಯಲ್ ರಸ್ತೆ, ಗಾಂಧಿ ಬಜಾರ್, ಅವೆನ್ಯೂ ರಸ್ತೆ, ಚಿಕ್‌ಪೇಟೆ ಮತ್ತು ಬಳೇಪೇಟೆ ಇತ್ಯಾದಿ.
 
ಬೆಂಗಳೂರು ನೆರೆಹೊರೆ: ಚಿಕ್ಕಬಳ್ಳಾಪುರ
  • ನಂದಿ ಬೆಟ್ಟ: ನಂದಿ ಬೆಟ್ಟ ಬೆಂಗಳೂರಿನಿಂದ ಅತ್ಯಂತ ಜನಪ್ರಿಯವಾದ ಸ್ಥಳವಾಗಿದೆ. ತಂಪಾದ ಗಾಳಿ, ರಮಣೀಯ ದೃಶ್ಯ, ಟಿಪ್ಪು ಡ್ರಾಪ್, ಉದ್ಯಾನ, ದೇವಸ್ಥಾನ ಮತ್ತಿತರ ಕಾರಣಗಳಿಂದಾಗಿ ನಗರವಾಸಿಗಳನ್ನು ಕೈಬೀಸಿ ಕರೆಯುತ್ತದೆ.
  • ಕೈವಾರ: ಹಿಂದೆ ಏಚಕ್ರಪುರ ಎಂದು ಕರೆಯಲಾಗುತ್ತಿದ್ದ ಕೈವಾರ ಪಾಂಡವರು ಕೌರವರೊಂದಿಗೆ ಪಗಡೆ ಆಟದಲ್ಲಿ ಸೋತ ನಂತರ ಅಜ್ಞಾತವಾಸ ನಡೆಸುತ್ತಿದ್ದ ಸ್ಥಳ ಎಂದು ನಂಬಲಾಗಿದೆ. ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮ, ಗ್ರಾಮಸ್ಥರನ್ನು ಸತತವಾಗಿ ಹಿಂಸಿಸುತ್ತಿದ್ದ ಬಕಾಸುರ ಎಂಬ ರಾಕ್ಷಸನನ್ನು ಇಲ್ಲಿ ಕೊಂದಿದ್ದಾನೆ ಎನ್ನಲಾಗಿದೆ. ಅಮರನಾರಾಯಣ ಮತ್ತು ಭೀಮೇಶ್ವರ ದೇವಾಲಯಗಳು ಮತ್ತು ಯೋಗಿ ನಾರಾಯಣ ಆಶ್ರಮವು ಕೈವಾರದಲ್ಲಿ ಭೇಟಿ ನೀಡಲು ಯೋಗ್ಯವಾಗಿದೆ. ಸಣ್ಣ ಮೃಗಾಲಯ, ಗಿಡಮೂಲಿಕೆ ಉದ್ಯಾನ, ಪಾಂಡವರ ಹೆಸರಿನ ಕುಟೀರಗಳು, ಉದ್ಯಾನ ಮತ್ತು ಸಂಗೀತ ಕಾರಂಜಿಗಳು ಕೈವಾರದಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.
 
ಬೆಂಗಳೂರು ನೆರೆಹೊರೆ: ರಾಮನಗರ ಜಿಲ್ಲೆ
  • ರಾಮನಗರ ಬಂಡೆ ಹತ್ತುವ ಸಾಹಸ: ರಾಮನಗರ ಜಿಲ್ಲೆಯು ದೈತ್ಯ ಬಂಡೆಗಳಿಗೆ ಹೆಸರುವಾಸಿಯಾಗಿದೆ. ರಾಮನಗರದಲ್ಲಿರುವ ರಾಮದೇವರ ಬೆಟ್ಟ ಸಾಹಸ ಪ್ರಿಯರನ್ನು ಮತ್ತು ಬಂಡೆ ಏರುವ ಆಸಕ್ತರನ್ನು ಆಕರ್ಷಿಸುತ್ತದೆ. ಬಂಡೆ ಏರುವುದು (ರಾಕ್ ಕ್ಲೈಂಬಿಂಗ್) ಮತ್ತು ಬಂಡೆಯ ಮೇಲಿಂದ ಹಂತ ಹಂತವಾಗಿ ಧುಮುಕುವುದು (ರಾಪೆಲಿಂಗ್) ಸಾಕಷ್ಟು ದೈಹಿಕ ಕ್ಷಮತೆ ಬೇಡುವ ಸಾಹಸ ಚಟುವಟಿಕೆಗಳಾಗಿದ್ದು ಯುವಜನತೆಯನ್ನು ಕೈ ಬೀಸಿ ಕರೆಯುತ್ತದೆ. ಹಲವಾರು ಖಾಸಗಿ ಕಂಪನಿಗಳು ರಾಮನಗರಕ್ಕೆ ಮಾರ್ಗದರ್ಶಿ ಪ್ರವಾಸಗಳು ಮತ್ತುಬಂಡೆ ಏರುವ ಸಾಹಸ ಯೋಜಿಸುತ್ತವೆ. Https://www.wandertrails.com/activities/ramanagara-trek ಪರಿಶೀಲಿಸಿ. ತಜ್ಞರ ಸಹಾಯ ಮತ್ತು ಮೇಲ್ವಿಚಾರಣೆಯಿಲ್ಲದೆ ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಬಂಡೆ ಏರುವುದು ಅಪಾಯಕಾರಿಯಾಗಿದೆ.
  • ವಂಡರ್ ಲಾ ಥೀಮ್ ಪಾರ್ಕ್: ರಾಮನಗರ ಜಿಲ್ಲೆಯ ಬೆಂಗಳೂರಿನ ಹೊರವಲಯದಲ್ಲಿರುವ ವಂಡರ್ ಲಾ ಜನಪ್ರಿಯ ಥೀಮ್ ಪಾರ್ಕ್ ಮತ್ತು ಮನರಂಜನಾ ಚಟುವಟಿಕೆ ಕೇಂದ್ರವಾಗಿದೆ. ಮೋಜಿನ ಸವಾರಿಗಳು, ನೀರಿನ ಆಟ‌ಗಳು ಮತ್ತು ಮೈ ನವಿರೇಳಿಸುವ ಸಾಹಸಿ ಸವಾರಿಗಳಿಂದಾಗಿ ವಂಡರ್ ಲಾ ಕುಟುಂಬದೊಂದಿಗೆ ದಿನ ಕಳೆಯಲು ನೆಚ್ಚಿನ ತಾಣವಾಗಿದೆ.
  • ಸಾವನದುರ್ಗ: ಸಾವನದುರ್ಗ ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟ, ಬೆಂಗಳೂರು ನಗರದಿಂದ ಪಶ್ಚಿಮಕ್ಕೆ 50 ಕಿ.ಮೀ.ದೂರದಲ್ಲಿದೆ. ಸಾವನದುರ್ಗದ ಇತಿಹಾಸವು 14 ನೇ ಶತಮಾನದಷ್ಟು ಹಿಂದಿನದು. 3 ನೇ ಹೊಯ್ಸಳ ರಾಜ ಬಲ್ಲಾಳ ಬೆಟ್ಟಕ್ಕೆ ಸವಂಡಿ ಎಂದು ಹೆಸರಿಟ್ಟನು. ನಂತರ ಸಾವನದುರ್ಗ ಕೆಂಪೇಗೌಡ, ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ಅಧೀನದಲ್ಲಿತ್ತು.
  • ಫೀವರ್ ಪಿಚ್: ಮಾಗಡಿ ಬಳಿ ಹೊರಾಂಗಣ ಸಾಹಸ ಕ್ರೀಡಾ ಸ್ಥಳ, ಬೆಂಗಳೂರಿನಿಂದ 38 ಕಿ.ಮೀ. ಎಟಿವಿ ಸವಾರಿಗಳು, ಕಯಾಕಿಂಗ್, ವಾಟರ್‌ಸ್ಪೋರ್ಟ್‌ಗಳು, ಕ್ಯಾಂಪಿಂಗ್ ಅನುಭವಗಳು, ತಂಡ ನಿರ್ಮಾಣ ಚಟುವಟಿಕೆಗಳು ಇತ್ಯಾದಿಗಳನ್ನು ನೀಡುತ್ತದೆ https://www.feverpitchholidays.com/
  • ಜಾನಪದ ಲೋಕ: ರಾಮನಗರದಿಂದ 10 ಕಿ.ಮೀ ದೂರದಲ್ಲಿ ಇರುವ ಜಾನಪದ ಲೋಕ ಒಂದು ತೆರೆದ ಸ್ಥಳವಾಗಿದ್ದು, ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ರಂಗಮಂದಿರ, ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಇಲ್ಲಿವೆ.
ಬೆಂಗಳೂರು ನೆರೆಹೊರೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ
  • ಮಕಾಳಿದುರ್ಗ: ಮಕಾಳಿದುರ್ಗ ಹಳ್ಳಿಯ ಸಮೀಪದಲ್ಲಿರುವ ಬೆಟ್ಟದ ಕೋಟೆ. ಇದು ಬೆಂಗಳೂರಿನ ಉತ್ತರಕ್ಕೆ 60 ಕಿ.ಮೀ ದೂರದಲ್ಲಿದೆ
  • ತಿಪ್ಪಗೊಂಡನಹಳ್ಳಿ ಜಲಾಶಯ: ಅರ್ಕಾವತಿ ಮತ್ತು ಕುಮುದಾವತಿ ವಿಲೀನಗೊಳ್ಳುವ ಜಲಾಶಯ. ಪ್ರಸ್ತುತ ಪ್ರವಾಸಿಗರಿಗಾಗಿ ಜಲಾಶಯವನ್ನು ಮುಚ್ಚಲಾಗಿದೆ.