Close

ಕೃಷಿ ಇಲಾಖೆ

ದೃಷ್ಟಿ ಕೋನ

2020 ನೇ ವರ್ಷದ ಅವಧಿಯೋಳಗೆ ಆಹಾರ ಭದ್ರತೆ ಒದಗಿಸುವುದರೊಂದಿಗೆ ಜೀವನಾಧಾರ ಬೆಂಬಲಕ್ಕಾಗಿ ಕೃಷಿಯನ್ನು ಒಂದು ಸುಸ್ಥಿರ ಮತ್ತು ಸಕ್ರಿಯ ಉದ್ದಿಮೆಯನ್ನಾಗಿ ಮಾಡುವುದೇ ಆಗಿರುತ್ತದೆ.

ಗುರಿ

  1. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನಗೊಳಿಸುವುದರೊಂದಿಗೆ ರೈತರ ಆದಾಯ ಮಟ್ಟವನ್ನು ಉತ್ತಮಪಡಿಸಿ ಆಹಾರೋತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕ್ಷೇತ್ರದ ಬೆಳವಣೆಗೆಯನ್ನು 4.5 ರಷ್ಟು ಗುರಿಯನ್ನು ಸಾಧಿಸುವುದಾಗಿದೆ.
  2. ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಕಂಡು ಬಂದಿರುವ ಸವಾಲುಗಳನ್ನು ನೀಗಿಸಲು ಅವಶ್ಯಕ ಸಂಶೋಧನಾ ಫಲಿತಾಂಶಗಳನ್ನು ನೀಡುವುದು ಮತ್ತು ಪ್ರಮುಖ ಶಿಕ್ಷಣ ಅವಕಾಶಗಳನ್ನು ಒದಗಿಸುವುದು.
  3. ಸುಸ್ಥಿರ ಕೃಷಿ ಅಭಿವೃದ್ದಿಗಾಗಿ ಜಾಗತಿಕ ಪೈಪೋಟಿಗಾಗಿ ಮಾನವ ಸಂಪನ್ಮೂಲ ಅವಕಾಶಗಳನ್ನು ಕಲ್ಪಿಸುವುದು.
  4. ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅವುಗಳ ನಿರಂತರ ಉಪಯೋಗವಾಗುವಂತೆ ಮಾಡುವುದು.
  5. ಕೃಷಿ ಹವಾಮಾನದಲ್ಲಿ ಸಂಭವಿಸಬಹುದಾದ ಅವಗಢ ಮತ್ತು ಆಪತ್ತು ನಿವರ್ಹಣೆ ಕ್ರಮ ವಹಿಸುವುದು.

ಉದ್ದೇಶಗಳು

  1. ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು.
  2. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಆಹಾರ ಭದ್ರತೆ ಒದಗಿಸುವುದು.
  3. ಕೃಷಿ ಪರಿಕರಗಳ ನಿರ್ವಹಣೆ.
  4. ತಂತ್ರಜ್ಞಾನ ಬಂಡವಾಳವನ್ನು ಉತ್ತೇಜಿಸುವುದು.
  5. ಆಪತ್ತು ನಿರ್ವಹಣೆ.
  6. ಯೋಜನೆಗಳ ಉಸ್ತುವಾರಿ ಮತ್ತು ಮೌಲ್ಯಮಾಪನ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಲಯ 5 ರಲ್ಲಿ ಇರುತ್ತದೆ. ಜಿಲ್ಲೆಯಾದ್ಯಂತ 4 ತಾಲ್ಲೂಕುಗಳಲ್ಲಿ 17 ರೈತ ಸಂಪರ್ಕ ಕೇಂದ್ರಗಳಿದ್ದು ಎಲ್ಲಾ ಕೃಷಿ ಕಾರ್ಯಕ್ರಮಗಳನ್ನು ಈ ಕೇಂದ್ರಗಳ ಮೂಲಕ ಆನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ವಾಡಿಕೆ ಮಳೆ 809 ಮಿ.ಮಿ ಇದ್ದು ಮುಂಗಾರು ಹಂಗಾಮಿನಲ್ಲಿ 54484 ಹೆ.ಹಿಂಗಾರಿನಲ್ಲಿ 1932 ಹೆ. ಮತ್ತು ಬೇಸಿಗೆಯಲ್ಲಿ 591 ಹೆ.ಬಿತ್ತನೆ ಪ್ರದೇಶ ಹೊಂದಿರುತ್ತದೆ. ಮುಖ್ಯವಾಗಿ ಮೇ. ಮತ್ತು ಸೆಪ್ಟಂಬರ್ ತಿಂಗಳಲ್ಲಿ ಹಂಚಿಕೆಯಾಗಿರುತ್ತದೆ. ರಾಗಿಯು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು ಮುಸುಕಿನಜೋಳ, ತೊಗರಿ, ಅಲಸಂದೆ, ಅವರೆ ಮತ್ತು ಇತರೆ ಬೆಳೆಗಳನ್ನು ಸಹ ರೈತರು ಬೆಳೆಯುತ್ತಿದ್ದಾರೆ. ಕೃಷಿ ಬೆಳೆಗಳ ಅಭಿವೃದ್ದಿಗಾಗಿ ಈ ಕೆಳಕಂಡ ಪ್ರಮುಖ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ರಾಷ್ಟೀಯ ಆಹಾರ ಭದ್ರತಾ ಮಿಷನ್

ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭವಾದ ರಾಷ್ಟೀಯ ಆಹಾರ ಭದ್ರತಾ ಅಭಿಯಾನ, ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲೂ ಮುಂದುವರೆದಿದೆ. ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ರಾಜ್ಯದಲ್ಲಿ ಭತ್ತ ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಒರಟು ಧಾನ್ಯಗಳು ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನೆಯನ್ನು ಸಹ ಹೆಚ್ಚಿಸಲು ಉದ್ದೇಶಿದ್ದು, ರಾಷ್ಟೀಯ ಆಹಾರ ಭದ್ರತಾ ಅಭಿಯಾನದಡಿ ಎನ್.ಎಫ್.ಎಸ್.ಎಂ – ಅಕ್ಕಿ ಮತ್ತು ಎನ್.ಎಫ್.ಎಸ್.ಎಂ-ದ್ವಿದಳಧಾನ್ಯ, ಎನ್.ಎಫ್.ಎಸ್.ಎಂ-ಒರಟುಧಾನ್ಯಗಳು, ಎನ್.ಎಫ್.ಎಸ್.ಎಂ-ವಾಣಿಜ್ಯ ಬೆಳೆಗಳು (ಹತ್ತಿ ಮತ್ತು ಕಬ್ಬು) ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಎನ್. ಎಫ್. ಎಸ್.ಎಂ-ದ್ವಿದಳಧಾನ್ಯ

ಈ ಯೋಜನೆಯಡಿ ವಿವಿಧ ತಾಂತ್ರಿಕತೆಗಳ ಕುರಿತು 100 ಹೆ ಪ್ರದೇಶದ ಗುಚ್ಚ ಪ್ರಾತ್ಯಕ್ಷತೆಗಳು, ಬೆಳೆ ಪದ್ದತಿ ಪ್ರಾತ್ಯಕ್ಷತೆಗಳು, ರೈತರಿಗೆ ರಿಯಾಯಿತಿ ದರದಲ್ಲಿ ಸುಧಾರಿತ ಬಿತ್ತನೆ ಬೀಜ ವಿತರಣೆ, ಸಮಗ್ರ ಪೋಷಕಾಂಶ ಮತ್ತು ಸಮಗ್ರ ಪೀಡೆ ನಿರ್ವಹಣೆಗೆ ಪರಿಕರಗಳ ವಿತರಣೆ, ವಿವಿಧ ಯಂತ್ರೋಪಕರಣಗಳು ಹಾಗೂ ಸಮರ್ಥ ನೀರು ಬಳಕೆಗೆ ಡೀಸೆಲ್ ಪಂಪ್ ಸೆಟ್ ಮತ್ತು ತುಂತುರು ನೀರಾವರಿ ಘಟಕ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾತ್ಯಕ್ಷಿಕೆ ಕೈಗೊಂಡ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ನೀರಿನ ಮಿತ ಬಳಕೆಯಿಂದ ಅಧಿಕ ಇಳುವರಿ ಪಡೆಯಲು ಹಾಗೂ ಲಘು ನೀರಾವರಿ ಪದ್ದತಿಯನ್ನು ಜನಪ್ರಿಯಗೊಳಿಸಲು ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ಸೂಕ್ಷ್ಮ ನೀರವಾರಿ ಘಟಕಗಳನ್ನು ಕಡಿಮೆ ವೆಚ್ಚದಲ್ಲಿ ಎಲ್ಲಾ ವರ್ಗದ ರೈತರಿಗೆ ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು ಶಕ್ತ ವೆಚ್ಚದಲ್ಲಿ ಪಡೆಯುವಂತೆ ಮಾಡಲು ಬಳಸಿಕೊಳ್ಳಲು ಮತ್ತು ಹೆಚ್ಚಿನ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಗಳಿಸಲು ಮುಖ್ಯಮಂತ್ರಿಗಳ ಸೂಕ್ಮ ನೀರಾವರಿ ಯೋಜನೆಯನ್ನು ಕೇಂದ್ರವಲಯದ ಅನುದಾನದೊಂದಿಗೆ ರಾಜ್ಯವಲಯದ ಅನುದಾನವನ್ನು ಸಮನ್ವಯಗೊಳಿಸಿ ಅನುಷ್ಟಾನಗೊಳಿಸಲಾಗುತ್ತಿದೆ.

ಹನಿ ನೀರಾವರಿ, ತುಂತುರು ನೀರಾವರಿ/ರೇನ್ ಗನ್ ಘಟಕಗಳ ಅಡಿಯಲ್ಲಿ ಭಾರತ ಸರ್ಕಾರ ನೀಡುವ ಆರ್ಥಿಕ ನೆರವಿಗೆ ಪೂರಕವಾಗಿ ರಾಜ್ಯ ಸರ್ಕಾರದ ಪಾಲಿನ ಆರ್ಥಿಕ ನೆರವನ್ನು ಭಾರತ ಸರ್ಕಾರದ ಮಾರ್ಗಸೂಚಿ ಮತ್ತು ಅನುಮೋದನೆ ಅನ್ವಯ ಶೇ. 90ರ ರಿಯಾಯತಿ ಸೌಲಭ್ಯ ಒದಗಿಸಲಾಗುತ್ತಿದೆ.

ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ

ರಾಜ್ಯದ ಎಲ್ಲಾ ರೈತ ಹಿಡುವಳಿದಾರರಿಗೆ ಮಣ್ಣು ಪರೀಕ್ಷೆ ಮಾಡಿ ಮಣ್ಣು ಆರೋಗ್ಯ ಚೀಟಿ ವಿತರಿಸುವುದು ಹಾಗೂ ಪೋಷಕಾಂಶಗಳ ಕೊರತೆ ನೀಗಿಸಲು, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡುವುದು.

ಪರಂಪರಾಗತ ಕೃಷಿ ವಿಕಾಶ ಯೋಜನೆ (PKVY)

ಸಾವಯವ ಕೃಷಿಯಲ್ಲಿ ಪರಿಸರ ಸ್ನೇಹಿ ಉತ್ಪಾದನಾ ಪದ್ದತಿಗಳಿಂದ ಮತ್ತು ಕಡಿಮೆ ವೆಚ್ಚದ ತಾಂತ್ರಿಕತೆ ಬಳಕೆ ಮಾಡಿಕೊಂಡು ಮಣ್ಣಿನ ಫಲವತ್ತತೆ ಕಾಪಾಡುವುದರೊಂದಿಗೆ ರಾಸಾಯನಿಕ ಉಳಿಕೆ ರಹಿತ, ಗುಣಮಟ್ಟದ ಸುರಕ್ಷಿತ ಆಹಾರದ ಉತ್ಪಾದನೆ ಮಾಡಬಹುದಾಗಿದೆ. ಇದೇ ತತ್ವದ ಆಧಾರದ ಮೇಲೆ PKVY ಯೋಜನೆಯಡಿಯೂ ಕ್ಲಸ್ಟರ್ (ಗುಚ್ಚ) ಮಾದರಿಯಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಸಹಭಾಗಿತ್ವ ಖಾತರಿ ವ್ಯವಸ್ಥೆ (PGS) ಪ್ರಮಾಣೀಕರಣ ಪದ್ದತಿ ಅನುಸರಿಸಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗಳಡಿ ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ಒದಗಿಸಲಾಗುವುದು. ರೈತರಿಗೆ ನೀಡುವ ವಿಮಾ ಕಂತಿನ ರಿಯಾಯತಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನೀಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅನುವು ಮಾಡಿಕೊಳ್ಳಲಾಗುತ್ತಿದೆ.

ರಾಷ್ಟ್ರೀಯ ಎಣ್ಣೆಕಾಳು ಮತ್ತು ತಾಳೆ ಬೆಳೆ ಅಭಿಯಾನ

ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಹೆಚ್ಚಿಸುವುದು. ಕ್ಷೇತ್ರ ಮಟ್ಟದಲ್ಲಿ ಮಣ್ನಿನ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಸ್ಥಿರಗೊಳಿಸುವುದು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಣ್ಣೆಕಾಳು ಉತ್ಪಾದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತಳಿವರ್ಧಕ ಬೀಜ ಖರೀದಿ, ಪ್ರಮಾಣಿತ ಬೀಜ ವಿತರಣೆ, ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆ, ಎಫ್.ಎಫ್.ಎಸ್.ಎಂ. ಪ್ರಾತ್ಯಕ್ಷಿಕೆ, ರೈತರಿಗೆ ತರಬೇತಿ, ವಿಸ್ತರಣಾ ಅಧಿಕಾರಿಗಳಿಗೆ ತರಬೇತಿ, ಜಿಪ್ಸಂ/ಪೈರೇಟ್ಸ್ ಸರಬರಾಜು, ಸಸ್ಯ ಸಂರಕ್ಷಣಾ ಔಷಧಿ ವಿರತಣೆ, ರೈಜೋಬಿಯಂ/ಪಿ.ಎಸ್.ಬಿ ವಿತರಣೆ, ಕಳೆನಾಶಕಗಳ ವಿತರಣೆ, ಲಘು ಪೋಷಕಾಂಶಗಳ ವಿತರಣೆ, ಕೃಷಿ ಉಪಕರಣಗಳ ವಿರತಣೆ, ನೀರು ಒದಗಿಸುವ ಪೈಪುಗಳು, ಎನ್.ಪಿ.ವಿ ವಿತರಣೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)

ಈ ಯೋಜನೆಯಡಿ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಹೆಚ್ಚಿನ ಸಾರ್ವಜನಿಕ ಹೂಡಿಕೆಗಾಗಿ ರಾಜ್ಯಗಳಿಗೆ ಪ್ರೋತ್ಸಾಹಿಸುವುದು, ಜಿಲ್ಲಾ ಕೃಷಿ ಯೋಜನೆಗಳಲ್ಲಿ ಸ್ಥಳೀಯ ಆದ್ಯತೆಗಳು/ಅವಶ್ಯಕತೆಗಳು/ಬೆಳೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು, ಹೊಸ ತಾಂತ್ರಿಕತೆಗಳನ್ನು ಅಳವಡಿಸಿ ಮುಖ್ಯ ಬೆಳೆಗಳ ಉತ್ಪಾದಕತೆಯಲ್ಲಿ ಇರುವ ವ್ಯತ್ಯಯದ ಪ್ರಮಾಣವನ್ನು ಕಡಿತಗೊಳಿಸುವುದು, ಕೃಷಿ ಮತ್ತು ಸಂಬಂಧಿತ ವಲಯದ ಎಲ್ಲಾ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ಉತ್ಪಾದನೆ/ಉತ್ಪಾದಕತೆಯ ವಿವಿಧ ಘಟಕಗಳಲ್ಲಿ ಗಣನೀಯ ಬದಲಾವಣೆ ತರುವುದು ಹಾಗೂ ಕೃಷಿ ಮತ್ತು ಸಂಬಂಧಿತ ವಲಯಗಳಿಂದ ರೈತರಿಗೆ ಹೆಚ್ಚಿನ ಲಾಭಾಂಶವನ್ನು ದೊರಕಿಸುವುದು.

ಕೃಷಿ ಭಾಗ್ಯ

ಮಳೆ ಆಶ್ರಿತ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಿ ಕೃಷಿ ಭಾಗ್ಯ ಯೋಜನೆಯನ್ನು 2014-15 ಸಾಲಿನಿಂದ ಜಾರಿಗೆ ತರಲಾಗಿದೆ. ಈ ಯೋಜನೆಯು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುತ್ತದೆ, ಕೃಷಿ ಭಾಗ್ಯ ಯೋಜನೆಯ ವಿವಿಧ ಘಟಕಗಳಾದ ನೀರು ಸಂಗ್ರಹಣಾ ರಚನೆಗಳು (ಕೃಷಿ ಹೊಂಡ), ಪಾಲಿಥೀನ್ ಹೊದಿಕೆ/ಪರ್ಯಾಯ ಮಾದರಿ, ನೀರು ಎತ್ತಲು ಡೀಸಲ್/ಸೋಲಾರ್ ಪಂಪ್ ಸೆಟ್, ನೀರು ಹಾಯಿಸಲು ಲಘು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ (Shadenet), ಒಣ ಬೇಸಾಯ ಪದ್ದತಿ (Recharge of functional borewells) ಅನುಷ್ಠಾನಕ್ಕೆ ಒದಗಿಸಲಾಗುವುದು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರಧನ ಮತ್ತು ಹಾವು ಕಡಿತಕ್ಕೆ ಪರಿಹಾರ

ಈ ಕಾರ್ಯಕ್ರಮದಡಿ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ರೂ. 5.00 ಲಕ್ಷ ಪರಿಹಾರ ಧನವನ್ನು ನೀಡಲಾಗುವುದು. ಹಾವು ಕಡಿತದಿಂದ, ಮರಗಳಿಂದ ಬಿದ್ದು ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಮತ್ತು ಕೃಷಿ ಕಾರ್ಮಿಕರ ಪ್ರತಿ ಅರ್ಹ ಕುಟುಂಬಕ್ಕೆ ರೂ.2.00 ಲಕ್ಷ ಪರಿಹಾರ ಧನ ಹಾಗೂ ಬೆಂಕಿ ಆಕಸ್ಮಿಕದಿಂದ ಹುಲ್ಲು ಮೆದೆ/ ಬಣವೆಗಳು ನಷ್ಟವಾದಲ್ಲಿ ಗರಿಷ್ಠ ರೂ. 20.000/- ಸಹಾಯಧನ ನೀಡಲಾಗುವುದು.

ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ್ ಪ್ರಶಸ್ತಿ

ರೈತರಿಗೆ ಉತ್ಪಾದನಾ ಬಹುಮಾನಗಳು-ರೈತರಲ್ಲಿ ಹೆಚ್ಚಿನ ಉತ್ಪಾದನೆ ಮಾಡುವ ಮನೋಭಾವ ಉಂಟುಮಾಡಲು ತಾಲ್ಲೂಕುಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಬೆಳೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುವುದು. ಕೃಷಿ ಕ್ಷೇತ್ರದಲ್ಲಿ ಅಮೂಲ್ಯ ಅನ್ವೇಷಣೆ ಹಾಗೂ ಸೃಜನಾತ್ಮಕ ಕಾರ್ಯಗಳನ್ನು ಕೈಗೊಂಡ ರೈತರನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿ ನೀಡುವುದು.

ಮಣ್ಣು ಆರೋಗ್ಯ ಅಭಿಯಾನ

ರಾಜ್ಯದ ಎಲ್ಲಾ ರೈತ ಹಿಡುವಳಿದಾರರಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮಣ್ಣು ಆರೋಗ್ಯ ಚೀಟಿ ವಿತರಿಸುವುದು ಹಾಗೂ ಪೋಷಕಾಂಶಗಳ ಕೊರತೆ ನೀಗಿಸಲು, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಬೀಜಗಳ ಪೂರೈಕೆ

ಈ ಕಾರ್ಯಕ್ರಮದಡಿ ರಾಜ್ಯದ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ. 75 ರ ರಿಯಾಯಿತಿ ದರದಲ್ಲಿ ಭತ್ತ ರಾಗಿ ಜೋಳ, ಮುಸುಕಿನ ಜೋಳ, ತೊಗರಿ, ಅಲಸಂದೆ, ನೆಲಗಡಲೆ, ಇತ್ಯಾದಿ ಬೆಳೆಗಳ ಪ್ರಮಾಣಿತ/ನೀಜಚೀಟಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವುದು.

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ

ಈ ಯೋಜನೆಯಡಿ ರೈತರಿಗೆ ಸಣ್ಣ ಟ್ರಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣಗಳು, ನಾಟಿ/ಬಿತ್ತನೆ ಉಪಕರಣಗಳು, ಕುಯ್ಲು ಮತ್ತು ಒಕ್ಕಣೆ ಉಪಕರಣಗಳು, ಡೀಸಲ್ ಪಂಪು ಸೆಟ್ ಅಂತರ ಬೇಸಾಯ ಉಪಕರಣಗಳು ಹಾಗೂ ಸಸ್ಯ ಸಂರಕ್ಷಣಾ ಉಪಕರಣಗಳನ್ನು ಕೃಷಿ ಸಂಸ್ಕರಣೆ ಘಟಕಗಳು ಹಾಗೂ ಟಾರ್ಪಾಲಿನ್ ಸಹಾಯ ಧನದಡಿ ವಿತರಿಸಲಾಗುತ್ತಿದೆ. ರೂ.2.00 ಲಕ್ಷದವರೆಗೆ ಇರುವ ಕೃಷಿ ಯಂತ್ರೋಪಕರಣಗಳನ್ನು ಪ್ರತಿ ರೈತ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು ಸಹಾಯಧನವನ್ನು ಗರಿಷ್ಠ ಮಿತಿ ರೂ. 100 ಲಕ್ಷದವರಿಗೆ ಹಾಗೂ ಸಣ್ಣ ಟ್ರಾಕ್ಟರ್ ಗಳಿಗೆ ರೂ. 75,000/- ಸಹಾಯಧನ ನೀಡಲಾಗುತ್ತಿದೆ. ರೂ.5.00 ಲಕ್ಷದವರೆಗೆ ಇರುವ ಕೃಷಿ ಉಪಕರಣಗಳನ್ನು ನೊಂದಾಯಿತ ರೈತ ಗುಂಪುಗಳಿಗೆ ಹಾಗೂ ಎಲ್ಲಾ ತರಹದ ಉಪಕರಣಗಳನ್ನು ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿಗೆ ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಸಣ್ಣ ಟ್ರಾಕ್ಟರ್ ಗಳಿಗೆ ರೂ. 2.00 ಲಕ್ಷ ಸಹಾಯಧನ ಹಾಗೂ ಉಳಿದ ಕೃಷಿ ಉಪಕರಣಗಳಿಗೆ ಮತ್ತು ಕೃಷಿ ಸಂಸ್ಕರಣೆ ಘಟಕಗಳು ಹಾಗೂ ಟಾರ್ಪಾಲಿನ್ ಗಳನ್ನು ಶೇ. 90. ರಷ್ಟು ಸಹಾಯಧನವನ್ನು ಗರಿಷ್ಟ ಮಿತಿ ರೂ. 1.00 ಲಕ್ಷದವರೆಗೆ ನೀಡಲಾಗುವುದು.

ಕೃಷಿ ಯಂತ್ರಧಾರೆ

ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ದತೆಯಿಂದ ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದ ಮೇಲೆ ಉಪಯೋಗಿಸಲು ಅವಕಾಶ ಕಲ್ಪಿಸುವುದು.

ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ

 

ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಉತ್ತೇಜಿಸಿ ಯುವ ರೈತರನ್ನು ಕೃಷಿಯತ್ತ ಸೆಳೆದು ಉದ್ಯೋಗಾವಕಾಶ ಸೃಜಿಸಲು ಹಾಗೂ ಸ್ಥಳೀಯವಾಗಿ ಕೃಷಿ ಉಪಕರಣಗಳ ದುರಸ್ತಿಗಾಗಿ ಹಾಗೂ ಲಘು ಉಪಕರಣಗಳ ತಯಾರಿಕೆಗಾಗಿ ಗ್ರಾಮೀಣ ಕೃಷಿ ಯಂತ್ರೋಪಕರಣ ದುರಸ್ತಿ ಸೇವಾ ಕೇಂದ್ರ ಸ್ಥಾಪನೆ.

ಸಾವಯವ ಕೃಷಿ

ಸಾವಯವ ಗುಂಪು ಪ್ರಮಾಣೀಕರಣ
1. ಸಾವಯವ ಭಾಗ್ಯ ಯೋಜನೆಯನ್ನು ಜಿಲ್ಲೆಯ 13 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, 1300 ಹೆ.ಪ್ರದೇಶವನ್ನು ಸಾವಯವ ಕೃಷಿ ಪದ್ದತಿಗೆ ಅಳವಡಿಸಲಾಗಿದೆ. ಯೋಜನಾ ಪ್ರದೇಶವನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣ ಸಂಸ್ಥೆಯ (KSOCA) ಮುಖಾಂತರ ಸಾವಯವ ಗುಂಪು ಪ್ರಮಾಣೀಕರಣಕ್ಕೆ ಒಳಪಡಿಸಲಾಗಿದೆ. 2017-18 ನೇ ಸಾಲಿನಲ್ಲಿಯೂ 13 ಯೋಜನಾ ಪ್ರದೇಶಗಳ ಸಾವಯವ ಗುಂಪು ಪ್ರಮಾಣೀಕರಣವನ್ನು ಮುಂದುವರೆಸಲಾಗುತ್ತಿದೆ.
ಮುಂದುವರೆದು ಸಾವಯವ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆಯನ್ನು ಒದಗಿಸಲು ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟವನ್ನು ರಚಿಸಲಾಗಿರುತ್ತದೆ. ಈ ಒಕ್ಕೂಟಗಳ ಮುಖಾಂತರ ಸಾವಯವ ಕೃಷಿ ಉತ್ಪನ್ನಗಳ ಸಂಗ್ರಹಣೆ, ಗ್ರೇಡಿಂಗ್ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್ ಬ್ರಾಂಡ್ ಅಭಿವೃದ್ದಿ, ಮಾರುಕಟ್ಟೆ, ಬಳಕೆದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಈ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಮಾರುಕಟ್ಟೆ ಆಧಾರಿತ ನಿರ್ದಿಷ್ಟ ಸಾವಯವ ಬೆಳೆ ಕ್ಲಸ್ಟರ್ ಗಳ ಆಭಿವೃದ್ದಿ ಕಾರ್ಯಕ್ರಮ
2. ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳಡಿ ಈಗಾಗಲೇ ಪ್ರಮಾಣೀಕೃತ ಸಾವಯವ ಕೃಷಿ ವ್ಯಾಪ್ತಿಗೆ ತರಲಾಗಿರುವ ಯೋಜನಾ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟಗಳ ಮುಖಾಂತರ ಮಾರುಕಟ್ಟೆ ಬೇಡಿಕೆ ಆಧಾರಿತ ನಿರ್ದಿಷ್ಟ ಸಾವಯವ ಬೆಳೆ ಕ್ಲಸ್ಟರ್ ಗಳ ಅಭಿವೃದ್ದಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕಾರ್ಯಕ್ರಮದಡಿಯಲ್ಲಿ ಸಾವಯವ ಕ್ಷೇತ್ರದಲ್ಲಿನ ಸಾಮರ್ಥ್ಯವುಳ್ಳ ಒಟ್ಟು 3 ಯೋಜನಾ ಪ್ರದೇಶಗಳಲ್ಲಿ (potential region)ಮಾರುಕಟ್ಟೆಗೆ ಒತ್ತು ನೀಡಿ ಉತ್ಪನ್ನ/ಬೆಳೆ ಯೋಜನೆಯನ್ನು ಕೈಗೊಂಡು ಗುಣಮಟ್ಟದ ಸಾವಯವ ಉತ್ಪನ್ನಗಳ ಸಮರ್ಪಕ ಹಾಗೂ ನಿರಂತರ ಪೂರೈಕೆಗಾಗಿ ಅವುಗಳ ಉತ್ಪಾದನೆ, ಸಂಗ್ರಹಣೆ, ವಿಂಗಡಣೆ, ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ಯಾಂಡ್ ಅಭಿವೃದ್ದಿ ಈ ಮುಂತಾದ ಚಟುವಟಿಕೆಗಳಿಗೆ ಬೆಂಬಲವನ್ನು ನೀಡುವ ಘಟಕಗಳೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುವುದು.

ವಿಸ್ತರಣಾಧಿಕಾರಿಗಳ ಮತ್ತು ರೈತರ/ರೈತ ಮಹಿಳೆಯರ ತರಬೇತಿ ಕಾರ್ಯಕ್ರಮ

ಈ ಯೋಜನೆಯಡಿ ಕೃಷಿ ವಿಸ್ತರಣಾಧಿಕಾರಿಗಳ ನಿರ್ವಹಣಾ ಸಾಮರ್ಥ್ಯ ಮತ್ತು ರೈತರ/ರೈತ ಮಹಿಳೆಯರಲ್ಲಿನ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ತರಬೇತಿಗಳು, ರೈತ/ರೈತ ಮಹಿಳೆಯರಿಗಾಗಿ ರಾಜ್ಯ ಮಟ್ಟದ ಅಧ್ಯಯನ ಪ್ರವಾಸವನ್ನು ಏರ್ಪಡಿಸುವುದು ಹಾಗೂ ಕೃಷಿ ಅಧಿಕಾರಿ/ ಸಹಾಯಕ ಕೃಷಿ ಅಧಿಕಾರಿ ಮತ್ತು ಕೃಷಿ ಸಹಾಯಕರಿಗೆ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಮಾನ್ಯ ಬುನಾದಿ ತರಬೇತಿ ನೀಡುವುದು.

ಕೃಷಿ ಅಭಿಯಾನ

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಈ ಕಾರ್ಯಕ್ರಮದಡಿ ಹೋಬಳಿ ಮಟ್ಟದಲ್ಲಿ ಕೃಷಿ ಮತ್ತು ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಜಲಾನಯನ, ಮೀನುಗಾರಿಕೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಸಮಗ್ರ ಕೃಷಿ ಮಾಹಿತಿ ಹಾಗೂ ಎಲ್ಲಾ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಪ್ರಚಾರಪಡಿಸಲಾಗುತ್ತಿದೆ.

ಸಂಪರ್ಕ ವಿವರಗಳು :
ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು.

080-26711594

https://raitamitra.karnataka.gov.in/