Close

ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳು

ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಇಲಾಖಾವತಿಯಿಂದ ಹಲವಾರು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ತ್ರೀಶಕ್ತಿ ಯೋಜನೆ:

ಸ್ತ್ರೀಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಅಕ್ಟೋಬರ್ 2000 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 3872 ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ರಚನೆಯಾಗಿದ್ದು, ಮಹಿಳೆಯರನ್ನು ಸ್ತ್ರೀಶಕ್ತಿ ಗುಂಪುಗಳಲ್ಲಿ ಸಂಘಟಿಸುವುದರ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಸಶಕ್ತತೆಯನ್ನು ತರುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಕಾನೂನು ಅರಿವು ನೀಡುವುದರ ಮೂಲಕ ಸಬಲೀಕರಣಗೊಳಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ತರುವುದು ಯೋಜನೆಯ ಮುಖ್ಯ ಗುರಿಯಾಗಿರುತ್ತದೆ. ಸ್ತ್ರೀಶಕ್ತಿ ಗುಂಪುಗಳು ರೂ.25000/- ದಿಂದ ರೂ.1.00 ಲಕ್ಷದವರೆಗೆ ಪಡೆಯುತ್ತಿರುವ ಬ್ಯಾಂಕ್ ಸಾಲಕ್ಕೆ ಶೇಕಡ 6ರ ಬಡ್ಡಿ ಸಹಾಯಧನವನ್ನು ಒದಗಿಸಲಾಗಿದೆ.ಅಧಿಕ ಉಳಿತಾಯ ಮಾಡಿರುವ ಗುಂಪುಗಳಿಗೆ ಪ್ರೋತ್ಸಾಹಧನ, ಹೆಚ್ಚುವರಿ ಸುತ್ತುನಿಧಿ ನೀಡಲಾಗುತ್ತಿದೆ.

ಮಾರ್ಚ್-2018ರ ಅಂತ್ಯದವರೆಗೆ 60,443 ಮಹಿಳೆಯರನ್ನು ಒಗ್ಗೂಡಿಸಲಾಗಿದೆ. ಪ್ರಾರಂಭದಿಂದ ಇಲ್ಲಿಯವರೆಗೆ ಸ್ತ್ರೀಶಕ್ತಿ ಗುಂಪಿನ ಸದಸ್ಯರ ಉಳಿತಾಯ ರೂ.2818.31 ಕೋಟಿಗಳಾಗಿರುತ್ತದೆ.

ಸಾಂತ್ವನ:

ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ ಪರಿಹಾರ ಹಾಗೂ ತರಬೇತಿ ಮುಖಾಂತರ ಸ್ವಾವಲಂಬಿಗಳಾಗುವಂತೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಶಕ್ತರನ್ನಾಗಿ ಗುರಿ ಹೊಂದಿದೆ. ಪ್ರಸ್ತುತ 05 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಸ್ವಾಧಾರ ಗೃಹ:

2016-17ನೇ ಸಾಲಿನಿಂದ ಕೇಂದ್ರ ಸರ್ಕಾರವು ಸ್ವಾಧಾರ ಮತ್ತು ಅಲ್ಪಾವಧಿ ವಸತಿ ಗೃಹ ವಿಲೀನಗೊಳಿಸಿ ಸ್ವಾಧಾರ ಗೃಹ ಯೋಜನೆ ಅನುಷ್ಠಾನಕ್ಕೆ ತಂದಿರುತ್ತಾರೆ. ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡುವುದು ಯೋಜನೆಯ ಉದ್ದೇಶ, ನೊಂದಣಿಯಾಗಿ ಮೂರು ವರ್ಷವಾಗಿರುವ ಆರ್ಥಿಕವಾಗಿ ಸದೃಢವಾದ ಎಲ್ಲಾ ಮೂಲಭೂತ ಅನುಕೂಲತೆಗಳನ್ನು ಹೊಂದಿದ, ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಅನುಭವವಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರಗಳಲ್ಲಿ, ಸಲಹಾ ಕೇಂದ್ರ, ತರಬೇತಿ ಕೇಂದ್ರ ಹಾಗೂ ವೈದ್ಯಕೀಯ ಕೇಂದ್ರಗಳನ್ನು ನಡೆಸಲು ಅವಕಾಶವಿದೆ. ರಾಜ್ಯದಲ್ಲಿ ಪ್ರಸ್ತುತ 02 ಸ್ವಾಧಾರ ಗೃಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006:

ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಉಂಟಾದಾಗ, ನ್ಯಾಯಾಲಯದ ಮುಖಾಂತರ ಮಹಿಳೆಯರಿಗೆ ಆರ್ಥಿಕ ಪರಿಹಾರ, ರಕ್ಷಣಾ ಆದೇಶ, ವಾಸದ ಆದೇಶ, ಮಕ್ಕಳ ವಶ, ತಾತ್ಕಾಲಿಕ ಆಶ್ರಯ, ವೈದ್ಯಕೀಯ ಹಾಗೂ ಕಾನೂನು ನೆರೆವನ್ನು ಒದಗಿಸಲು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಹಾಗೂ ನಿಯಮ 2006ನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಗೆಳತಿ ವಿಶೇಷ ಚಿಕಿತ್ಸಾ ಘಟಕ:

2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಲಾಗಿರುತ್ತದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಅಂದರೆ, ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೋಲೀಸ್ ನೆರವು, ಕಾನೂನು ನೆರವು ಹಾಗೂ ಸಮಾಲೋಚನೆ ವ್ಯವಸ್ಥೆಗಳನ್ನು ಒದಗಿಸಲು ಗೆಳತಿ ವಿಶೇಷ ಚಿಕಿತ್ಸಾ ಘಟಕವನ್ನು ಜಿಲ್ಲಾ ಆಸ್ಪತ್ರೆ ಕೆ.ಸಿ.ಜನರಲ್ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಪ್ರಾರಂಭಿಸಲಾಗಿರುತ್ತದೆ. ಈ ಘಟಕವು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದು, ಉಚಿತ ಮಹಿಳಾ ಸಹಾಯವಾಣಿ 1800 4251 6066 ಲಭ್ಯವಿರುತ್ತದೆ. ಘಟಕದಲ್ಲಿ ವೈದ್ಯಾಧಿಕಾರಿಗಳು, ಕಾನೂನು ಸಲಹೆಗಾರರು, ಪೊಲೀಸ್ ಅಧಿಕಾರಿಗಳು, ಆಪ್ತ ಸಮಾಲೋಚಕರು ಹಾಗೂ ಸಮಾಜ ಸೇವಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ನೊಂದ ಮಹಿಳೆಯರಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. 2017-18ನೇ ಸಾಲಿನ ಆಯವ್ಯಯ ಘೋಷಣೆಯಾದ ಮೇರೆಗೆ 4 ತಾಲ್ಲೂಕುಗಳಲ್ಲಿ ದಿನಾಂಕ: 19-03-2018ದಂದು “ಗೆಳತಿ ವಿಶೇಷ ಚಿಕಿತ್ಶಾ ಘಟಕ ಉದ್ಘಾಟಿಸಲಾಗಿದೆ.
ಸ್ಥೈರ್ಯನಿಧಿ ಯೋಜನೆ: 2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು ಜಿಲ್ಲಾ ಮಟ್ಟದಲ್ಲಿ ರೂ.5.00ಲಕ್ಷ ಮಹಿಳೆಯರ ನಿಧಿಯನ್ನು ಸ್ಥಾಪಿಸಲಾಗುವುದು. ಈ ನಿಧಿಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರ ತುರ್ತು ಪರಿಹಾರಕಾಗಿ ರೂ.25000/-ಗಳನ್ನು ನೀಡಲಾಗುವುದು ಹಾಗೂ ಪ್ರತಿ ಪ್ರಕರಣಕ್ಕೆ ಗರಿಷ್ಠ ರೂ.2.00ಲಕ್ಷ ಪರಿಹಾರ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ದೌರ್ಜನ್ಯದಿಂದ ಅಥವಾ ಆಸಿಡ್ ದಾಲಿಗೊಳಗಾಗಿ ಮೃತಪಟ್ಟಲ್ಲಿ ಸದರಿ ಕುಟುಂಬಕ್ಕೆ ರೂ.1.00 ಲಕ್ಷ ಮರಣ ಪರಿಹಾರವನ್ನು ನೀಡಲಾಗುವುದು.

ಕರ್ನಾಟಕ ವಿವಾಹ ಕಾಯ್ದೆ, 1976:

ಈ ಕಾಯ್ದೆಯನ್ನು ದಿನಾಂಕ: 01-04-2004ರಂದು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಹಾಗೂ ಈ ಕಾಯ್ದೆಗೆ ರಾಜ್ಯದ ನಿಯಮಗಳನ್ನು 18-04-2006ರ ಅಧಿಸೂಚನೆಯನ್ವಯ ಮುಖ್ಯ ವಿವಾಹ ನೋಂದಣಾಧಿಕಾರಿಗಳಾಗಿ ನೇಮಿಸಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಉಪ ನೋಂದಣಾಧಿಕಾರಿಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರನ್ನು ಗ್ರಾಮಾಂತರ ಮಟ್ಟದಲ್ಲಿ ವಿವಾಹ ನೋಂದಣಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಎಲ್ಲಾ ದರ್ಮೀಯ ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಆದೇಶಸಿರುವುದರಿಂದ, ಪರಿಷ್ಕೃತ ಕರಡು ನಿಯಮಗಳನ್ನು ರಚಿಸಲಾಗಿದೆ.

ವರದಕ್ಷಿಣೆ ನಿಷೇಧ ಕಾಯ್ದೆ 1961 (2007-08):

ವರದಕ್ಷಿಣೆಯ ವ್ಯವಸ್ಥೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ವರದಕ್ಷಿಣೆ ನಿಷೇದ ಕಾಯ್ದೆ 1961ರ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಕಾಯ್ದೆಗೆ 1984 ಹಾಗೂ 1986ರಲ್ಲಿ ತಿದ್ದುಪಡಿಯನ್ನು ಮಾಡಲಾಗಿದೆ. ರಾಜ್ಯದಲ್ಲಿ ಇದಕ್ಕೆ ನಿಯಮಾವಳಿಗಳನ್ನು ದಿನಾಂಕ:31-03-2004ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ಮುಖ್ಯ ವರದಕ್ಷಿಣೆ ನಿಷೇದ ಅಧಿಕಾರಿಗಳನ್ನಾಗಿ ದಿನಾಂಕ: 17-06-2004ರ ಅಧಿಸೂಚನೆಯ ಪ್ರಕಾರ ನೇಮಿಸಲಾಗಿರುತ್ತದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಸಮನ್ವಯ ಸಮಿತಿಯ ಮೂಲಕ ಈ ಕಾಯ್ದೆಯ ಅನುಷ್ಠಾನದ ಪರಿಶೀಲನೆಯನ್ನು ಕೈಗೊಳ್ಳಲಾಗುತ್ತಿದೆ. ವರದಕ್ಷಿಣೆ ಪಿಡುಗನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.