Close

ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ೆಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಹೂಡುತ್ತಿರುವ ಬಂಡವಾಳವಾಗಿರುತ್ತದೆ. ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷ ರೊಳಗಿನ ಕಲ್ಯಾಣವು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ.

ಯೋಜನೆಯ ಉದ್ದೇಶ:

  1. 0-6 ವರ್ಷದೊಳಗಿನ ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಹಾಗೂ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು.
  2. ಮಗುವಿನ ಮಾನಸಿಕ, ಸಾಮಾಜಿಕ, ದೈಹಿಕ ಸಮರ್ಪಕ ಬೆಳವಣಿಗೆಗೆ ಬುನಾದಿ ಹಾಕುವುದು.
  3. ಶಿಶು ಮರಣ ದರ, ಅಪೌಷ್ಠಿಕತೆ, ಕಾಯಿಲೆ ಪ್ರಮಾಣ ಹಾಗೂ ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದು.
  4. ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಇತರೆ ಇಲಾಖೆಗಳೊಂದಿಗೆ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು.
  5. ಪೌಷ್ಠಿಕಾಂಶ ಹಾಗೂ ಆರೋಗ್ಯ ಶಿಕ್ಷಣವವನ್ನು ನೀಡುವುದರ ಮೂಲಕ ಮಕ್ಕಳ ಸಾಮಾನ್ಯ ಆರೋಗ್ಯ ಹಾಗೂ ಪೌಷ್ಠಿಕ ಮಟ್ಟವನ್ನು ಕಾಪಾಡುವ ಬಗ್ಗೆ ತಾಯಂದಿರ ಸಾಮರ್ಥ್ಯವನ್ನು ಹೆಚ್ಚಿಸುವುದು.
ಐ.ಸಿ.ಡಿ.ಎಸ್. ಸೇವಾ ಸೌಲಭ್ಯಗಳು
ಸೇವೆಗಳು ಫಲಾನುಭವಿಗಳು ಯಾರ ಮುಖಾಂತರ ಅಂಗನವಾಡಿಗಳಲ್ಲಿ ಸೇವೆ ಲಭ್ಯವಿದೆ
ಪೂರಕ ಪೌಷ್ಠಿಕ ಆಹಾರ 6 ವರ್ಷ ಒಳಗಿನ ಮಕ್ಕಳು ಗರ್ಭಿಣಿ, ಬಾಣಂತಿ, ಕಿಶೋರಿಯರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
ಚುಚ್ಚುಮದ್ದು 6 ವರ್ಷ ಒಳಗಿನ ಮಕ್ಕಳು ಗರ್ಭಿಣಿಯರು ಕಿರಿಯ ಆರೋಗ್ಯ ಸಹಾಯಕಿ, ಆರೋಗ್ಯ ಇಲಾಖೆ
ಆರೋಗ್ಯ ತಪಾಸಣೆ 6 ವರ್ಷ ಒಳಗಿನ ಮಕ್ಕಳು ಗರ್ಭಿಣಿ, ಬಾಣಂತಿಯರು ವೈದ್ಯಾಧಿಕಾರಿಗಳು/ಕಿರಿಯ ಆರೋಗ್ಯ ಸಹಾಯಕಿ
ಮಾಹಿತಿ ಸೇವೆ 6 ವರ್ಷ ಒಳಗಿನ ಮಕ್ಕಳು ಗರ್ಭಿಣಿ, ಬಾಣಂತಿ, ಕಿಶೋರಿಯರು ವೈದ್ಯಾಧಿಕಾರಿಗಳು/ಕಿರಿಯ ಆರೋಗ್ಯ ಸಹಾಯಕಿ/ಅಂಗನವಾಡಿ ಕಾರ್ಯಕರ್ತೆ
ಶಾಲಾ ಪೂರ್ವ ಶಿಕ್ಷಣ 3-6 ವರ್ಷದ ಮಕ್ಕಳು ಅಂಗನವಾಡಿ ಕಾರ್ಯಕರ್ತೆ
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ 15-45 ವಯಸ್ಸಿನ ಮಹಿಳೆಯರು, ಕಿಶೋರಿಯರು, ಅಂಗನವಾಡಿ ಕಾರ್ಯಕರ್ತೆ/ಆರೋಗ್ಯ ಇಲಾಖೆ/ಆಹಾರ ಮತ್ತು ಪೌಷ್ಠಿಕ ಮಂಡಳಿಯ ಸಿಬ್ಬಂದಿ

ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಭರಿಸುವ ಯೋಜನೆ:

2007-08ನೇ ಸಾಲಿನಲ್ಲಿ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್ಕಾರದಿಂದ ಪ್ರಾರಂಭಿಸಲಾಗಿದ್ದು, ತೀವ್ರ ನ್ಯೂನಪೋಷಣೆಗೊಳಗಾದ ಮಕ್ಕಳ ಪೌಷ್ಠಿಕ ಮಟ್ಟ ಸುಧಾರಿಸಿ ಸಾಮಾನ್ಯ ದರ್ಜೆಗೆ ತರಲು ವೈದ್ಯಾಧಿಕಾರಿಗಳ ಸೂಚನೆಯಂತೆ ಔಷದೋಪಚಾರ ಹಾಗೂ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವರ್ಷಕ್ಕೆ ರೂ.2000/-ನ್ನು ನೀಡಲಾಗುತ್ತಿದೆ.

ಮಾತೃಪೂರ್ಣ ಯೋಜನೆ:

ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟವನ್ನು ಅಂಗನವಾಡಿ ಕೇಂದ್ರದಲ್ಲಿಯೇ ನೀಡುವ “ಮಾತೃ ಪೂರ್ಣ” ಯೋಜನೆಯನ್ನು ಅಕ್ಟೋಬರ್ 2ನೇ ತಾರೀಖಿನಿಂದ ಜಿಲ್ಲಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಮಹಿಳೆಯರಿಗೆ ಆಹಾರ ಭದ್ರತೆಯನ್ನು ಒದಗಿಸುವ ಜೊತೆಗೆ ಹೆರಿಗೆ ಸಮಯದಲ್ಲಿನ ಗರ್ಭಿಣಿ ಹಾಗೂ ಶಿಶುಗಳ ಮರಣ ಪ್ರಮಾಣ ಮತ್ತು ಕಡಿಮೆ ತೂಕದ ಮಕ್ಕಳ ಜನನ ನಿಯಂತ್ರಣ ಯೋಜನೆಯ ಉದ್ದೇಶವಾಗಿರುತ್ತದೆ.

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ:

ಈ ಯೋಜನೆಯು ಧನ ಸಹಾಯ ಯೋಜನೆಯಾಗಿದೆ. 0-6 ತಿಂಗಳವರೆಗೆ ಕೇವಲ ತಾಯಿ ಎದೆ ಹಾಲುಣಿಸುವುದು, ಹೆರಿಗೆಯಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದು ಹಾಗೂ ಅತಿ ಸಣ್ಣಮಕ್ಕಳಿಗೆ ಉಣಿಸುವ ಅಭ್ಯಾಸಗಳನ್ನು ಬೆಳಸಿಕೊಳ್ಳುವ ಬಗ್ಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಹಾಗೂ ಗರ್ಭಿಣಿಯರಿಗೆ ಬಾಣಂತಿಯರಿಗೆ ಆರೋಗ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡುವುದು. ಮೊದಲನೆ ಕಂತು ರೂ.1000/-ಗಳನ್ನು, ಗರ್ಭಿಣಿಯಾಗಿ 6 ತಿಂಗಳಲ್ಲಿ, ಎರಡನೇ ಕಂತು ರೂ.2000/-ಗಳನ್ನು ಗರ್ಭಿಣಿಯಾಗಿ 6 ತಿಂಗಳ ನಂತರ ನೀಡಲಾಗುವುದು. ಮೂರನೇ ಕಂತು ರೂ.2000/-ಗಳನ್ನು ಮಗು ಮೊದಲನೇ ಹಂತದ ಚುಚ್ಚುಮದ್ದು ಪಡೆದ ನಂತರ ಒಟ್ಟು 3 ಕಂತುಗಳಲ್ಲಿ ರೂ.5000/-ಗಳ ಹೆರಿಗೆ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುವುದು. ಮೇಲ್ಕಂಡ ಫಲಾನುಭವಿಗಳು ಎನ್ ಆರ್ ಹೆಚ್ ಎಮ್ ಅಡಿ ಜನನಿ ಸುರಕ್ಷಾ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಭಾಗ್ಯಲಕ್ಷ್ಮಿ:

2006-07ನೇ ಸಾಲಿನಲ್ಲಿ ಈ ಯೋಜನೆಯಡಿ ಅಡಿಯಲ್ಲಿ ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ “ಭಾಗ್ಯಲಕ್ಷ್ಮಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು.

ಈ ಯೋಜನೆಯ ಆರ್ಥಿಕ ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ/ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದಲ್ಲಿ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31-03-2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ. ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ. ಯೋಜನೆಯ ಸೌಲಭ್ಯಗಳು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕದ್ದು ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ 2ಕ್ಕಿಂತ ಹೆಚ್ಚಿಗೆ ಇರಬಾರದು. ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ದಿನಾಂಕ:31-07-2008ರವರೆಗೆ ಜನಿಸಿದ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗಿದೆ. ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣುಮಗುವಿನ ಹೆಸರಿನಲ್ಲಿ ಇಟ್ಟ ರೂ.10,000/-ಗಳ ಠೇವಣಿಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ, ಠೇವಣಿ ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗಳಿಗೆ 18 ವರ್ಷಗಳು ಪೂರ್ಣಗೊಂಡನಂತರ ದೊರಕಿಸಿಕೊಡುತ್ತದೆ. ಮೊದಲ ಮಗುವಿಗೆ ಪರಿಪಕ್ವ ಮೊತ್ತ ರೂ.34,751/-ನ್ನು ಮತ್ತು ಎರಡನೇ ಮಗುವಿಗೆ ರೂ.40,918/-ನ್ನು ನೀಡಲಾಗುತ್ತದೆ. ಫಲಾನುಭವಿಗೆ ವಿದ್ಯಾರ್ಥಿ ವೇತನ, ವಿಮೆ ಸೌಲಭ್ಯ ಮುಂತಾದ ಮಧ್ಯಂತರ ಸಂದಾಯವಗಳನ್ನು ಯೋಜನೆಯಡಿ ತಿಳಿಸಲಾದ ಅರ್ಹತೆ ಮಾನದಂಡಗಳನ್ನು ಪೂರೈಸುತ್ತಿದ್ದಲ್ಲಿ ನೀಡಲಾಗುವುದು.

ಈ ಯೋಜನೆಯನ್ನು ದಿನಾಂಕ:06-03-2015ರಂದು ಪರಿಷ್ಕರಿಸಲಾಗಿರುತ್ತದೆ.(ದಿನಾಂಕ: 01-08-2008 ರಿಂದ ಜನಿಸಿದ ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತದೆ). ಪರಿಷ್ಕರಿಸಲಾದ ಯೋಜನೆಯ ರೂಪುರೇಷೆಗಳು ಕೆಳಕಡಂತಿವೆ. ಯೋಜನೆಯಡಿ ನೋಂದಣಿಯಾದ ಕುಟುಂಬದಲ್ಲಿನ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ ರೂ.19,300/- ಹಾಗೂ ಅದೇ ಕುಟುಂಬದಲ್ಲಿನ 2ನೇ ಹೆಣ್ಣು ಮಗುವಿನ ಹೆಸರಿನಲ್ಲಿ ರೂ.18,350/-ಗಳನ್ನು ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ರೇಷಣಿ ಇಡಲಾಗುತ್ತದೆ. 18 ವರ್ಷ ಪೂರ್ಣ ಪೂರ್ಣಗೊಂಡ ನಂತರದಲ್ಲಿ ಹೆಣ್ಣು ಮಕ್ಕಳು ರೂ.1,00,000/-ಪರಿಪಕ್ವ ಮೊತ್ತ ಪಡೆಯಲು ಅರ್ಹರಿರುತ್ತಾರೆ.

ಯೋಜನೆಯ ಉದ್ದೇಶಗಳು:

  1. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ್ಲಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಸುವುದು ಮತ್ತು ಆತ್ಮ ಸ್ಥೈರ್ಯ ತುಂಬುವುದು.
  2. ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವುದು.
  3. ಆರೋಗ್ಯ, ಶಿಕ್ಷಣ, ಪೋಷಣೆ ಮತ್ತು ಪೌಷ್ಠಿಕ ಮಟ್ಟವನ್ನು ಉತ್ತಮ ಪಡಿಸುವುದರ ಮೂಲಕ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತಮಪಡಿಸುವುದು.
  4. ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅವರನ್ನು ಸಮಾಜದಲ್ಲಿ ಸದೃಢರನ್ನಾಗಿ ಮಾಡುವುದು.

ಬಾಲ್ಯ ವಿವಾಹ ನಿಷೇಧ ಕಾಯ್ದೆ:

ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:11154/2006ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಶಿವರಾಜ್.ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ:30-06-2011ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ. ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ: ಮಮಇ 501 ಎಸ್ ಜೆಡಿ 2011 ದಿನಾಂಕ:16-11-02011ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ನಿರ್ದೇಶನಾಲಯದಲ್ಲಿ 1 ಉಪನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕಯಂತ್ರ ಸಹಾಯಕರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.

ಸದರಿ ವರದಿಯಲ್ಲಿನ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶವು 2017-18ನೇ ಸಾಲಿನಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ.

  1. ಬಾಲ್ಯ ವಿವಾಹ ನಿಷೇಧ ಕಾರ್ಯಕ್ರಮಗಳಿಗಾಗಿ 2017-18ನೇ ಸಾಲಿನಲ್ಲಿ 2018ನೇ ಮಾರ್ಚ್ ಅಂತ್ಯಕ್ಕೆ ರೂ.103.51 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ.
  2. 01-04-2017 ರಿಂದ 28-02=2018 ರವರೆಗೆ 1114 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.
  3. ಬಾಲ್ಯವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರಲಾಗಿದ್ದು, ಬಾಲ್ಯವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆ 2016 ದಿನಾಂಕ:03-03-2018ರಿಂದ ಜಾರಿಗೆ ಬಂದಿರುತ್ತದೆ.
  4. ದೂರದರ್ಶನದಲ್ಲಿ ಪ್ರಸಾರ ಮಾಡಲು ಬಾಲ್ಯವಿವಾಹ ನಿಷೇಧ ಕುರಿತ 60 ಸೆಕೆಂಡುಗಳ ಸ್ಪಾಟ್ ತಯಾರಿಸಲಾಗಿದೆ.

ಉಜ್ವಲ:

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಯಲಯವು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಹಾಗೂ ಸಾಗಾಣಿಕೆಗೆ ಹಾಗೂ ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟವರನ್ನು ರಕ್ಷಿಸಲು, ಇವರಿಗೆ ಪುನರ್ ವಸತಿ ಕಲ್ಪಿಸಲು ಮತ್ತು ಕುಟುಂಬದವರೊಂದಿಗೆ ಪುನರ್ ವಿಲೀನಗೊಳಿಸಲು ಉಜ್ವಲ ಎಂಬ ಸಮಗ್ರ ಯೋಜನೆಯನ್ನು ರೂಪಿಸಿರುತ್ತದೆ.

ಯೋಜನೆಯ ಉದ್ದೇಶಗಳು:

  • ಸಮಾಜವನ್ನು ಸಜ್ಜುಗೊಳಿಸಿ, ಸ್ಥಳೀಯ ಸಮುದಾಯವನ್ನು ತೊಡಗಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾರ್ವಜನಿಕ ಸಭೆಗಳನ್ನು ನಡೆಸಿ, ಕಾರ್ಯಗಾರ/ವಿಚಾರ ಗೋಷ್ಟಿಗಳ ಮೂಲಕ ಹಾಗೂ ನವೀನ ಚಟುವಟಿಕೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳು ವಾಣಿಜ್ಯ ಲೈಂಗಿಕ ದುರು[ಯೋಗಕ್ಕಾಗಿ ಸಾಗಾಣಿಕೆಯಾಗುವುದನ್ನು ತಡೆಯಲು ಕ್ರಮಕೈಗೊಳ್ಳುವುದು.
  • ಸಾಗಾಣಿಕೆಗೆ ಒಳಗಾದವರನ್ನು ಶೋಷಣೆ ಸ್ಥಳದಿಂದ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇಡಲು ಸಹಾಯ ಮಾಡುವುದು.
  • ಸಾಗಾಣಿಕೆಗೆ ಒಳಗಾಗದವರಿಗೆ ಮೂಲಭೂತ ಸೌಲಭ್ಯ, ಆಶ್ರಯ, ಆಹಾರ, ವಸ್ತ್ರ, ಸಮಲೋಚನೆ ಒಳಗೊಂಡಂತೆ ವೈದ್ಯಕೀಯ ಸೌಲಭ್ಯ, ಕಾನೂನಿನ ನೆರವು ಮತ್ತು ಮಾರ್ಗದರ್ಶನ ಹಾಗೂ ವೃತ್ತಿ ತರಬೇತಿ ಸೇರಿದಂತೆ ತಕ್ಷಣ ಮತ್ತು ದೀರ್ಘಕಾಲಿಕ ಪುನರ್ವಸತಿ ಸೇವೆಯನ್ನು ಒದಗಿಸುವುದು.
  • ಸಾಗಾಣಿಕೆಗೆ ಒಳಗಾದವರನ್ನು ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ವಿಲೀನಗೊಳಿಸಲು ಸಹಾಯ ಮಾಡುವುದು.
  • ಗಡಿಪ್ರದೇಶವನ್ನು ದಾಟಿ ಬಂದಂತಹ ಸಾಗಾಣಿಕೆಗೆ ಒಳಗಾದವರನ್ನು ತನ್ನ ಮೂಲ ರಾಷ್ಟ್ರಕ್ಕೆ ಕಳುಹಿಸಿಕೊಡಲು ಸಹಾಯ ಮಾಡುವುದು.

ಟಾರ್ಗೆಟ್ ಗುಂಪು:

  • ವಾಣಿಜ್ಯ ಲೈಂಗಿಕ ದುರುಪಯೋಗಕ್ಕಾಗಿ ತುತ್ತಾಗಬಹುದಾದ ಮಹಿಳೆಯರು ಮತ್ತು ಮಕ್ಕಳು
  • ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟಿರುವ ಮಹಿಳೆಯರು ಮತ್ತು ಮಕ್ಕಳು

ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ:

ಸನ್ಮಾನ್ಯ ಪ್ರಧಾನ ಮಂತ್ರಿಗಳು “ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ” ಎಂಬ ಹೊಸ ಯೋಜನೆಯನ್ನು 22,ಜನವರಿ 2015ರಂದು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತಂದಿರುತ್ತಾರೆ. ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತವನ್ನು  ಉತ್ತಮ ಪಡಿಸುವುದು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು, “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

  • ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವುದು
  • ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು.
  • ಹೆಣ್ಣು ಮಕ್ಕಳ ಶಿಕ್ಷಣವನ್ನು ಖಾತ್ರಿಗೊಳಿಸುವುದು.